ಮಂಗಳೂರು : ಎತ್ತಿನಹೊಳೆ (ನೇತ್ರಾವತಿ ನದಿ ತಿರುವು) ಯೋಜನೆಯಿಂದ ಕರಾವಳಿ ಭಾಗದ ಪರಿಸರ, ಜೀವವೈವಿಧ್ಯ ಹಾಗೂ ಕುಡಿಯುವ ನೀರಿನ ಭದ್ರತೆಗೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಆಗ್ರಹಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ನೀರಿನ ಸಮಸ್ಯೆ ಪರಿಹಾರಕ್ಕಾಗಿ 2012ರಲ್ಲಿ ಆರಂಭವಾದ ಯೋಜನೆಯ ವೆಚ್ಚ ₹9,000 ಕೋಟಿಯಿಂದ ಸುಮಾರು ₹23,000 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದರು.

ಸರ್ಕಾರ ಯೋಜನೆಯಿಂದ ಏಳು ಜಿಲ್ಲೆಗಳಿಗೆ ವಾರ್ಷಿಕ 24.01 ಟಿಎಂಸಿ ನೀರು ದೊರೆಯಲಿದೆ ಎಂದು ಹೇಳುತ್ತಿದ್ದರೆ, ಐಐಎಸ್‌ಸಿ ಅಧ್ಯಯನದಲ್ಲಿ ಕೇವಲ 9.55 ಟಿಎಂಸಿ ನೀರು ಮಾತ್ರ ಲಭ್ಯವಿದೆ ಎಂದು ಉಲ್ಲೇಖಿಸಿರುವುದು ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಅನುಮಾನ ಮೂಡಿಸಿದೆ ಎಂದು ಹೇಳಿದರು.

ತುಂಬೆ ವೆಂಟೆಡ್ ಡ್ಯಾಂ ಮೇಲೆ ಅವಲಂಬಿತವಾಗಿರುವ ಕರಾವಳಿ ಭಾಗಕ್ಕೆ ನೀರಿನ ಹರಿವು ಕಡಿಮೆಯಾಗುವ ಅಪಾಯವಿದ್ದು, ಬೇಸಿಗೆಯಲ್ಲಿ ನೇತ್ರಾವತಿ ನದಿಯ ಹರಿವು ಕುಂಠಿತಗೊಳ್ಳುವ ಸಾಧ್ಯತೆ ಇದೆ. ಯೋಜನೆಯಿಂದ ನದಿಯ ಕೆಳಭಾಗದ ಜನರ ಮೇಲೆ ಆಗುವ ಪರಿಣಾಮಗಳ ಕುರಿತು ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ ಹಾಗೂ ಪರ್ಯಾಯ ನೀರಿನ ಮೂಲಗಳ ಬಗ್ಗೆ ಸರ್ಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಆರೋಪಿಸಿದರು.

ವಾರಾಹಿ ನೀರಾವರಿ ಯೋಜನೆಯು ಕೋಟ್ಯಂತರ ರೂ. ವೆಚ್ಚದ ಬಳಿಕವೂ ದಶಕಗಳಿಂದ ಅಪೂರ್ಣವಾಗಿರುವುದನ್ನು ಉಲ್ಲೇಖಿಸಿದ ಅವರು, ಎತ್ತಿನಹೊಳೆ ಯೋಜನೆ ಮುಂದುವರಿಸುವ ಮುನ್ನ ಸರ್ಕಾರ ಪಾರದರ್ಶಕ ವೈಜ್ಞಾನಿಕ ಮೌಲ್ಯಮಾಪನ ನಡೆಸಿ ಕರಾವಳಿ ಭಾಗದ ಜನರ ಆತಂಕಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಮಹಿಳಾ ಘಟಕ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ವಾಸುದೇವ್, ಕಬೀರ್ ಕಾಟಿಪಳ್ಳ, ಶಾಲೆಟ್ ಪಿಂಟೊ ಹಾಗೂ ಲೆಸ್ಲಿ ಫೆರ್ನಾಂಡಿಸ್ ಉಪಸ್ಥಿತರಿದ್ದರು.