ಸುರತ್ಕಲ್: ಸುರತ್ಕಲ್ ಗುಡ್ಡೆಕೊಪ್ಲ ಕಡಲತೀರದಲ್ಲಿ ಕಳೆದ ಕೆಲವು ವರ್ಷಗಳಿಂದ ನಿಂತಿದ್ದ “ಭಗವತಿ ಪ್ರೇಮ್’ ಎಂಬ ಬೃಹತ್ ಗಾತ್ರದ ಡ್ರೆಡ್ಡರ್ ಹಡಗನ್ನು ಒಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಈ ಭಾಗದಲ್ಲಿ ಜನರ ಗಮನ ಸೆಳೆಯುತ್ತಿದ್ದ ಸೆಲ್ಸಿ ಪಾಯಿಂಟ್ ಮಾಯವಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಮಳೆಗಾಲದಲ್ಲಿ ಬೀಸಿದ ಭಾರೀ ಮಳೆ-ಗಾಳಿಗೆ ಎನ್‌ಎಂಪಿಟಿ ಬಂದರಿನಲ್ಲಿ ಲಂಗರು ಹಾಕಿದ್ದ “ಭಗವತಿ ಪ್ರೇಮ್’ ಡ್ರೆಡ್ಡರ್ ಆ್ಯಂಕರ್‌ಕಿತ್ತುಕೊಂಡು ಸುರತ್ಕಲ್ ಗುಡ್ಡೆಕೊಪ್ಲ ತೀರಕ್ಕೆ ಬಂದು ನಿಂತಿತ್ತು. ತಾಂತ್ರಿಕ ಕಾರಣಗಳಿಂದ ಅದನ್ನು ಮತ್ತೆ ಸಮುದ್ರಕ್ಕೆ ಎಳೆಯಲು ಸಾಧ್ಯವಾಗಿರಲಿಲ್ಲ. ಹೂಳೆತ್ತಲು ಬಂದಿದ್ದ ಡ್ರೆಡ್ಡರ್ ಸಮುದ್ರದ ಉಗ್ರ ರೂಪಕ್ಕೆ ತುತ್ತಾಗಿ ಕೆಟ್ಟು ಹೋಗಿ ನಿಯಂತ್ರಣ ಕಳೆದು ಕೊಂಡು ಗುಡ್ಡೆ ಕೊಪ್ಲ ಕಡಲ ತೀರದಲ್ಲಿ ನಿಂತಿತ್ತು. ಹೀಗೆ ಅನಿರೀಕ್ಷಿತವಾಗಿ ಬಂದು ನಿಂತ ಹಡಗು ಬಳಿಕ ಪ್ರವಾಸಿ ತಾಣವಾಗಿ ಬದಲಾಗಿತ್ತು.

ಕಡಲ ತಡಿಯಲ್ಲಿ ಸಿಲುಕಿದ್ದ ಈ ಬೃಹತ್ ಹಡಗು ನೋಡಲು ಪ್ರತಿದಿನ ನೂರಾರು ಜನ ಬರುತ್ತಿದ್ದರು. ಮಕ್ಕಳನ್ನು ಕರೆದುಕೊಂಡು ಕುಟುಂಬ ಸಮೇತ ಬಂದು ಸಮಯ ಕಳೆಯುವುದು, ಹಡಗಿನ ಹಿನ್ನೆಲೆಯಲ್ಲಿ ಸೆಲ್ಪಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಹಿರಿಯ ನಾಗರಿಕರಿಗೆ ಇದು ವಾಯುವಿಹಾರದ ಸ್ಥಳವಾಗಿತ್ತು. ಹೊರಗಿನಿಂದ ಬರುವ ಪ್ರವಾಸಿಗರಿಗೂ “ಗುಡ್ಡೆಕೊಪ್ಪ ಡ್ರೆಡ್ಡರ್’ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಸ್ಥಳೀಯರ ಪಾಲಿಗೆ ಇದು ಒಂದು ಹೆಗ್ಗುರುತಾಗಿ ಬಿಟ್ಟಿತ್ತು.

ಇತ್ತ ಡ್ರೆಡ್ಡರ್‌ನಿಂದ ಮೀನುಗಾರಿಕೆಗೆ ತೊಂದರೆಯಾಗುತ್ತಿದೆ, ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯರು, ಮೀನು ಗಾರರು ನಿರಂತರವಾಗಿ ತೆರವಿಗೆ ಒತ್ತಾಯಿಸುತ್ತಲೇ ಇದ್ದರು. ಹಲವು ಮಳೆಗಾಲಗಳನ್ನು ಕಂಡ ಈ ಹಡಗಿನಿಂದಾಗುವ ಸಮಸ್ಯೆ ಬಗ್ಗೆ ದೂರುಗಳು ಹೆಚ್ಚಾಗಿದ್ದವು. ಇದರ ಬೆನ್ನಲ್ಲೇ ಬಂದರು ಇಲಾಖೆ ಹಡಗು ಒಡೆಯಲು ಗುತ್ತಿಗೆ ನೀಡಿತ್ತು.

“ಭಗವತಿ ಪ್ರೇಮ್’ ಅನ್ನು ಇದೀಗ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಸಮುದ್ರ ಶಾಂತವಾಗಿರುವ, ತಿಳಿಯಾಗಿರುವ ಸಂದರ್ಭನೋಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಬೃಹತ್ ಗಾತ್ರದ ಹಡಗನ್ನು ಸ್ಥಳದಲ್ಲೇ ಕಬ್ಬಿಣದ ತುಂಡುಗಳಾಗಿ ಕತ್ತರಿಸಿ ತೆಗೆಯಲಾಗುತ್ತಿದೆ. ನೀರಿನಡಿ ಇರುವ ಭಾಗವನ್ನು ಕತ್ತರಿಸಲು ವಿಶೇಷ ತಂತ್ರಜ್ಞಾನ ಬಳಸಲಾಗುತ್ತಿದೆ. ನುರಿತ ಕಾರ್ಮಿಕರು ಗ್ಯಾಸ್ ಕಟರ್‌ಬಳಸಿ ಹಂತ ಹಂತವಾಗಿ ಹಡಗನ್ನು ಬೇರ್ಪಡಿಸುತ್ತಿದ್ದಾರೆ.

ಹಡಗು ಒಡೆಯುವ ಸಂದರ್ಭದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯಾಗದಂತೆ ಹಾಗೂ ಇತರ ಮಾಲಿನ್ಯ ಉಂಟಾಗದಂತೆ ಎಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಪರಿಸರ ನಿಯಮಗಳ ಪಾಲನೆಯೊಂದಿಗೆ ಕಾರ್ಯ ನಡೆಯುತ್ತಿದೆ.