ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಒಬ್ಬರು ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಉತ್ತರಕನ್ನಡ ನಿವಾಸಿ ಕೀರಪ್ಪ (54) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ. ಅವರು ಶಿರಸಿ ಠಾಣೆಯಿಂದ ಕಳೆದ 5 ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು. ಇವರ ಕುಟುಂಬ ಸದಸ್ಯರು ಉತ್ತರ ಕನ್ನಡದಲ್ಲೇ ಇದ್ದು,ಇವರು ಒಬ್ಬರೇ ಇಲ್ಲಿ ಇದ್ದರು. ಬಂಟ್ವಾಳ ಪೇಟೆಯಲ್ಲಿರುವ ಚಿನ್ನದ ಉದ್ಯಮಿಯೋರ್ವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು.

ಬೆಳಿಗ್ಗೆಯಿಂದ ಕರ್ತವ್ಯ ಕ್ಕೆ ಹಾಜರಾಗದೆ ಇದ್ದ ಸಬ್ ಇನ್ಸ್ ಪೆಕ್ಟರ್ ಅವರು ಪೋನ್ ಕಾಲ್ ಕೂಡ ರಿಸೀವ್ ಮಾಡದೆ ಇದ್ದ ಕಾರಣದಿಂದ ಸಂಶಯಗೊಂಡ ಪೊಲೀಸರು ಇಂದು ಸಂಜೆ ವೇಳೆ ಅವರು ವಾಸಿಸುವ ಬಾಡಿಗೆ ಮನೆಗೆ ಹೋಗಿ‌ ನೋಡಿದಾಗ ಬೀಗ ಹಾಕಿದ ಸ್ಥಿತಿಯಲ್ಲಿ ಇತ್ತು.

ಕರೆದಾಗ ಯಾವುದೇ ಸ್ಪಂದನೆ ನೀಡದೆ ಇದ್ದಾಗ, ಕಿಟಕಿಯಲ್ಲಿ ನೋಡಿದಾಗ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಆಡಿಷನಲ್ ಎಸ್.ಪಿ. ಭೇಟಿ ನೀಡಿದ್ದಾರೆ.