ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಸಾಗಿಸುವ ಅನೇಕ ಖಾಸಗಿ ಹಾಗೂ ಶೈಕ್ಷಣಿಕ ಸಂಸ್ಥೆಗಳ ವಾಹನಗಳಲ್ಲಿ ನಿಗದಿತ ಅಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಸಂಚರಿಸಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ನಿರಂತರವಾಗಿ ದೂರುಗಳು ಕೇಳಿಬರುತ್ತಿವೆ. ಈ ರೀತಿಯ ನಿರ್ಲಕ್ಷ್ಯವು ವಿದ್ಯಾರ್ಥಿಗಳ ಜೀವ ಭದ್ರತೆಗೆ ಗಂಭೀರ ಅಪಾಯವನ್ನುಂಟು ಮಾಡುವುದಲ್ಲದೆ, ಯಾವುದೇ ತಿಣದಲ್ಲಿ ಸಂಭವಿಸಬಹುದಾದ ದುರ್ಘಟನೆಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ.

ಪ್ರಸ್ತುತ ಜಿಲ್ಲೆಯಾದ್ಯಂತ ಮಳೆಗಾಲ ತೀವ್ರಗೊಂಡಿದ್ದು, ಜಾರುವ ರಸ್ತೆಗಳು, ಗುಂಡಿಗಳು, ನೀರು ನಿಂತಿರುವ ರಸ್ತೆಗಳು, ಕಡಿಮೆ ಗೋಚರತೆ ಹಾಗೂ ವಾಹನ ಸಂಚಾರಕ್ಕೆ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ. ಇಂತಹ ಸಂದರ್ಭಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಂದೇ ವಾಹನದಲ್ಲಿ ಸಾಗಿಸುವುದು ಅತ್ಯಂತ ಅಪಾಯಕಾರಿಯಾಗಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಇದರ ಜೊತೆಗೆ, ಜಿಲ್ಲೆಯ ಹಲವು ಶಾಲಾ ವಾಹನಗಳು ಹಳೆಯದಾಗಿದ್ದು, ಅವುಗಳ ಬ್ರೇಕ್ ವ್ಯವಸ್ಥೆ, ಟೈರ್‌ಗಳ ಸ್ಥಿತಿ, ಸ್ಪೀರಿಂಗ್, ಎಂಜಿನ್, ವಿದ್ಯುತ್ ಸಂಪರ್ಕ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಅಗತ್ಯ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸುತ್ತಿದೆಯೇ ಎಂಬ ಕುರಿತು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಆದ್ದರಿಂದ ಇಂತಹ ವಾಹನಗಳ ಸಮಗ್ರ ತಾಂತ್ರಿಕ ಪರಿಶೀಲನೆ ಮತ್ತು ಕಡ್ಡಾಯ ಫಿಟೈಸ್ ಪರೀಕ್ಷೆ ನಡೆಸುವುದು ಕಾಲದ ಅಗತ್ಯವಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆ ಎಂಬುದು ಯಾವುದೇ ಸಂಸ್ಥೆಯ ಜವಾಬ್ದಾರಿಯಷ್ಟೇ ಅಲ್ಲ, ಸರ್ಕಾರ ಹಾಗೂ ಆಡಳಿತದ ಪ್ರಮುಖ ಆದ್ಯತೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾತ್ಯತೀತ) ಪಕ್ಷದ ಪರವಾಗಿ ತಮ್ಮಲ್ಲಿ ಈ ಕೆಳಕಂಡ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸವಿನಯವಾಗಿ ಮನವಿಯನ್ನ rto ಅಧಿಕಾರಿಗೆ ಮನವಿಯನ್ನ ಮುಖಂಡ ಯೌಗಿಶ್ ಶೆಟ್ಟಿ ಜೆಪ್ಪು ಸಾರಥ್ಯದ ನಿಯೋಗ ನೀಡಿದರು.