ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ. ಬೆಂಗಳೂರಿನಿಂದ ಮಂಗಳೂರಿಗೆ ದಸರಾ ಹಬ್ಬಕ್ಕೆ ವಿಶೇಷ ರೈಲು ಸೇವೆ ಆರಂಭವಾಗಲಿದೆ. ಸೆಪ್ಟೆಂಬರ್ 30 ರಂದು ಯಶವಂತಪುರದಿಂದ ರೈಲು ಹೊರಡಲಿದೆ. ಅಕ್ಟೋಬರ್ 1 ರಂದು ಮಂಗಳೂರಿಗೆ ತಲುಪಲಿದೆ.

ಅದೇ ದಿನ ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ ಆಗಲಿದೆ. ಈ ರೈಲು ಬಂಟ್ವಾಳ, ಪುತ್ತೂರು, ಸಕಲೇಶಪುರ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ. ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ.

ಸೆಪ್ಟೆಂಬರ್ 30 ರಂದು ರಾತ್ರಿ 11.55 ಕ್ಕೆ ಯಶವಂತಪುರ ಜಂಕ್ಷನ್‌ – ಮಂಗಳೂರು ಜಂಕ್ಷನ್‌ ರೈಲು (ಸಂಖ್ಯೆ 06257) ಯಶವಂತಪುರ ಜಂಕ್ಷನ್‌ ನಿಲ್ದಾಣದಿಂದ ಹೊರಟು ಅಕ್ಟೋಬರ್ 1 ರಂದು ಬೆಳಗ್ಗೆ 11.15 ಕ್ಕೆ ಮಂಗಳೂರು ಜಂಕ್ಷನ್‌ ತಲುಂಪಲಿದೆ. ಅ.1 ರಂದು ಮಧ್ಯಾಹ್ನ 2.35 ಕ್ಕೆ ಮಂಗಳೂರು ಜಂಕ್ಷನ್‌- ಯಶವಂತಪುರ ಜಂಕ್ಷನ್‌ ರೈಲು (ಸಂಖ್ಯೆ 06258) ಮಂಗಳೂರು ಜಂಕ್ಷನ್‌ನಿಂದ ಹೊರಟು ರಾತ್ರಿ 11.30 ಕ್ಕೆ ಯಶವಂತಪುರ ಜಂಕ್ಷನ್‌ ತಲುಪಲಿದೆ. (ಹುಬ್ಬಳ್ಳಿ – ಕೇರಳ ನಡುವೆ ವಿಶೇಷ ರೈಲು)

ಈ ರೈಲಿಗೆ ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ನಡುವೆ ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್‌, ಸಕಲೇಶಪುರ, ಹಾಸನ ಜಂಕ್ಷನ್‌, ಚನ್ನರಾಯಪಟ್ಟಣ, ಕುಣಿಗಲ್‌ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಾಗಿದೆ. (ಮಂಗಳೂರಿಗೆ ವಂದೇ ಭಾರತ್ ಸ್ಲೀಪರ್‌ಗೆ ಪ್ರಸ್ತಾವನೆ) ರೈಲಿನಲ್ಲಿ 2 ಲಗೇಜ್‌ ಕಂ ಗಾರ್ಡ್‌ ಕೋಚ್‌, 4 ಜನರಲ್‌ ಕೋಚ್‌, 11 ಸ್ಲೀಪರ್‌ ಕ್ಲಾಸ್‌, 3 ತೃತೀಯ ದರ್ಜೆ ಎ ಸಿ, 2 ದ್ವಿತೀಯ ದರ್ಜೆ ಎಸಿ ಕೋಚ್‌ಗಳಿರಲಿವೆ.

ಈಗಾಗಲೇ ರೈಲು ಸಂಖ್ಯೆ 06257 ಯಶವಂತಪುರ ಜಂಕ್ಷನ್‌ – ಮಂಗಳೂರು ಜಂಕ್ಷನ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ಬುಕ್ಕಿಂಗ್‌ ಆರಂಭಗೊಂಡಿದೆ. ರೈಲು ಸಂಖ್ಯೆ 06258 ಮಂಗಳೂರು ಜಂಕ್ಷನ್‌ – ಯಶವಂತಪುರ ಜಂಕ್ಷನ್‌ ವಿಶೇಷ ಎಕ್ಸ್‌ಪ್ರೆಸ್‌ ರೈಲಿನ ಟಿಕೆಟ್‌ ಬುಕ್ಕಿಂಗ್‌ ಕೂಡ ಆರಂಭಗೊಳ್ಳಲಿದೆ. ನವರಾತ್ರಿಯ ಕೊನೆಯ ದಿನಗಳಲ್ಲಿಆಯುಧ ಪೂಜೆ, ಮಹಾನವಮಿ, ವಿಜಯ ದಶಮಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಮಂಗಳೂರಿಗೆ ಬರುವ ಪ್ರಯಾಣಿಕರಿಗೆ ಈ ರೈಲು ಸಹಕಾರಿಯಾಗಲಿದೆ.