ಬೆಳ್ತಂಗಡಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳ ಘೋಷಣೆ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕಸ್ತೂರಿರಂಗನ್ ವರದಿಯ ಅಧಿಸೂಚನೆ ಹೊರಡಿಸಿದ್ದು ಇದರ ವಿರುದ್ಧ ಶಿರ್ಲಾಲು ಗ್ರಾಮ ಪಂಚಾಯಿತಿಯ ವಿಶೇಷ ಗ್ರಾಮಸಭೆಗೆ ಪಿಡಿಒ ಸೇರಿದಂತೆ ಯಾವುದೇ ಇಲಾಖೆಯ ಅಧಿಕಾರಿಗಳು ಭಾಗವಹಿಸದಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸೂಚನೆಯಂತೆ ತಾಲೂಕಿನ ಕಸ್ತೂರಿ ರಂಗನ್ ವರದಿ ಬಾಧಿತ ಪ್ರದೇಶಗಳ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮಸಭೆ ನಡೆಸಲು ಆದೇಶ ನೀಡಲಾಗಿತ್ತು. ಅದರಂತೆ ಸೋಮವಾರ ಶಿರ್ಲಾಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಗ್ರಾಮಸಭೆ ಏರ್ಪಡಿಸಿದ್ದು, ಸಂತ್ರಸ್ತರು ನೂರಾರು ಸಂಖ್ಯೆ ಯಲ್ಲಿ ಬೆಳಗ್ಗೆ 10 ಗಂಟೆಗೆ ಹಾಜರಿದ್ದರು. ಆದರೆ ಮಧ್ಯಾಹ್ನ 12ರ ತನಕವೂ ಪಿಡಿಒ ಸೇರಿದಂತೆ ಇಲಾಖೆಯ ಅಧಿಕಾರಿ ಗಳು ಹಾಜರಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಯಿತು.
ಸೂಚನೆ ವಿರುದ್ಧಸೆ.21ರಂದು ಶಿರ್ಲಾಲು ಗ್ರಾಮದ ವ್ಯಾಪ್ತಿಗೆ ಒಳಪಟ್ಟ ಗ್ರಾಮಸ್ಥರ ಆಕ್ಷೇಪಣೆ, ಸಲಹೆ ಪಡೆಯುವ ನಿಟ್ಟಿನಲ್ಲಿ ವಿಶೇಷ ಗ್ರಾಮಸಭೆಯನ್ನು ಪಿಡಿಒ ಸುಶೀಲಾ ಆಯೋಜಿಸಿದ್ದರು. ಆದರೆ ಅವರು ರಜೆ ಹಾಕಿ ವಿಶೇಷ ಗ್ರಾಮಸಭೆಗೆ ಗೈರುಹಾಜರಾಗಿದ್ದರು.
ವಿಶೇಷ ಗ್ರಾಮಸಭೆಯಲ್ಲಿ ಅರಣ್ಯ, ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಕೆಲವು ಅಗತ್ಯ ಇಲಾಖೆಗಳ ಅಧಿ ಕಾರಿಗಳು ಹಾಜರಿರದೆ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಶಿರ್ಲಾಲು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಂಜು ನಾಥ್ ಮತ್ತು ಸಹಾಯಕ ಅರಣ್ಯಾಧಿಕಾರಿ ಹರಿಪ್ರಸಾದ್ ಆಗಮಿಸಿದರು. ಇದು ಕೂಡ ಜನರ ಆಕ್ರೋಶಕ್ಕೆ ಕಾರಣವಾಯಿತು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೋಮವಾರದ ಸಭೆ ರದ್ದುಗೊಳಿಸಿ, ಸೆ.23ರಂದು ಮತ್ತೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ವಿಶೇಷ ಕಸ್ತೂರಿರಂಗನ್ ಗ್ರಾಮಸಭೆ ನಡೆಸಲಾಗುತ್ತದೆ ಎಂದು ಆಡಳಿತಾಧಿಕಾರಿ ಮಂಜುನಾಥ್ ಪ್ರಕಟಿಸಿದರು.
ವಿಶೇಷ ಗ್ರಾಮಸಭೆ ನಿಗದಿ ಮಾಡಿದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಂಜೀವಿನಿ ಒಕ್ಕೂಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಜನರು ಪಂಚಾಯಿತಿ ಕಚೇರಿ ಎದುರು ಬಿಸಿಲಿನಲ್ಲಿ ನಿಲ್ಲುವಂ ತಾಯಿತು.
ವಿಶೇಷ ಗ್ರಾಮಸಭೆಗೆ ಪಿಡಿಒ ಸೇರಿದಂತೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಸಂತ್ರಸ್ತರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಮಾಹಿತಿ ನೀಡಿದ್ದು, ಮಂಗಳೂರಿನ ಕಾರ್ಯಕ್ರಮ ಮುಗಿಸಿ ನೇರವಾಗಿ ಶಿರ್ಲಾಲು ಪಂಚಾ ಯಿತಿಗೆ ಆಗಮಿಸಿ ಆಡಳಿತಾಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು.
ಜನರ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿಗಳು ರಾಜೀನಾಮೆ ನೀಡಿ ಮನೆಗೆ ನಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಕರೆ ಮಾಡಿ, ವಿಶೇಷ ಗ್ರಾಮಸಭೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದರು. ಕಸ್ತೂರಿರಂಗನ್ ವಿರೋಧಿ ಹೋರಾಟ ಸಮಿತಿ ಸಹ ಸಂಚಾಲಕ ಎಂ.ಕೆ.ಪ್ರಸಾದ್ ಶಿರ್ಲಾಲು, ಜಯಾನಂದ ಪಿಲಿಕಲ, ಶೇಖರ್ ಲಾಯಿಲ, ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

