ಮಂಗಳೂರು: 2002ರ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವ ಹೆಸರು ಹಾಜಬ್ಬ ಹಾಗೂ ಪ್ರಸ್ತುತ ಇರುವ ಅಧಿಕೃತ ದಾಖಲೆಗಳಲ್ಲಿ ನಮೂದಾಗಿರುವ ಹೆಸರಿನಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬಗೆ ಸೋಮವಾರ ನೋಟಿಸ್ ನೀಡಿದ್ದ ಚುನಾವಣಾ ಆಯೋಗ, ಅದೇ ದಿನ ದಾಖಲೆಗಳನ್ನು ಪರಿಶೀಲಿಸಿ ಸರಿಪಡಿಸಿದೆ.
2002ರ ಮತದಾರರ ಪಟ್ಟಿಯ ಪ್ರಕಾರ, ಹಾಜಬ್ಬ ಅವರ ಹೆಸರು ಕೇವಲ “ಹಾಜಬ್ಬ” ಎಂದು ಮಾತ್ರ ದಾಖಲಾಗಿತ್ತು. ಆದರೆ, ಅವರ ಪಡಿತರ ಚೀಟಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಮತ್ತು ಮತದಾರರ ಗುರುತಿನ ಚೀಟಿ ಸೇರಿದಂತೆ ಪ್ರಸ್ತುತ ಇರುವ ಅಧಿಕೃತ ದಾಖಲೆಗಳಲ್ಲಿ ಅವರ ಹೆಸರು “ಹರೇಕಳ ಹಾಜಬ್ಬ” ಎಂದು ದಾಖಲಾಗಿದೆ.
ಮತದಾರರ ಪಟ್ಟಿಯ ವಿವರಗಳನ್ನು ಪರಿಶೀಲಿಸಲು ಮತ್ತು ಮತದಾರರ ದಾಖಲೆಗಳು ನಿಖರವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗವು ಪರಿಷ್ಕರಣಾ ಕಾರ್ಯವನ್ನು ಕೈಗೊಂಡಿದೆ. ಈ ನೋಟಿಸ್ನಲ್ಲಿ ಹಾಜಬ್ಬ ಅವರು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಸೆಪ್ಟೆಂಬರ್ 11 ರಂದು ಹಾಜರಾಗಿ ತಮ್ಮ ಪ್ರಸ್ತುತ ಹೆಸರು ಮತ್ತು ಗುರುತಿನ ವಿವರಗಳಿಗೆ ಪೂರಕವಾದ ದಾಖಲೆಗಳನ್ನು ಸಲ್ಲಿಸುವಂತೆ ಕೇಳಲಾಗಿತ್ತು.
ಸಮಾಜ ಸೇವೆ ಮತ್ತು ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿದೆ.
ಬೀದಿಯಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುತ್ತಾ ತಾವು ಎದುರಿಸುತ್ತಿರುವ ಬಡತನದ ನಡುವೆಯೂ ಸುತ್ತ ಮುತ್ತಲಿನ ಪ್ರದೇಶದ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ತಮ್ಮ ಔದಾರ್ಯ ಗುಣಗಳಿಂದ ವ್ಯಾಪಕವಾಗಿ ಗುರುತಿಸಿಕೊಂಡಿರುವ ಹಾಜಬ್ಬ ಅವರು ತಮ್ಮ ಕೆಲಸಕ್ಕಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆದಿದ್ದಾರೆ.

