ಬಂಟ್ವಾಳ: ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯಿತಿ, ಉಡುಪಿ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಎಸ್ ಕ್ರೀಟ್ ಅಡೆಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ‘ಉಸಿರು ಕೋಟ’ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನೀಡಲಾಗುವ 6ನೇ ವರ್ಷದ ‘ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ-2026’ಕ್ಕೆ ದಕ್ಷಿಣ ಕನ್ನಡ ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಕಾಮಜಲಿನ ಸಹ ಶಿಕ್ಷಕಿ ಶ್ರೀಮತಿ ಸುಧಾ ಸಂದೇಶ್ ಅವರು ಭಾಜನರಾಗಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿರುವ ಸುಧಾ ಸಂದೇಶ್ ಅವರು ಕಾಮಜಲು ಶಾಲೆಗೆ ಸೇರಿದ ಬಳಿಕ ಶಾಲೆಯ ಶೈಕ್ಷಣಿಕ ವಾತಾವರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಕಾರ್ಯನಿರ್ವಹಿಸಿದ್ದಾರೆ. ಊರಿನ ದಾನಿಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆದು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವ ಅವರ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ಪ್ರದಾನ ಮಾಡಲಾಗಿದೆ. ಸುಧಾ ಸಂದೇಶ್ ಅವರ ಪ್ರಯತ್ನದ ಫಲವಾಗಿ 2025-26ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ ಶಾಲೆಗೆ ಲಭಿಸಿದೆ.
ಶಾಲೆಯ ಅಭಿವೃದ್ಧಿಗೆ ದಾನಿಗಳ ನೆರವು ಪಡೆದು ಸುಮಾರು ₹10 ಲಕ್ಷ ವೆಚ್ಚದಲ್ಲಿ ತರಗತಿ ಕೊಠಡಿ ನಿರ್ಮಾಣ, ಸುಮಾರು ₹3 ಲಕ್ಷ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಕೆ ಮಾಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುವಂತಾಗಲು ಸುಮಾರು ₹70 ಸಾವಿರ ವೆಚ್ಚದಲ್ಲಿ ಎರಡು ಕಂಪ್ಯೂಟರ್ಗಳು ಹಾಗೂ ಪ್ರಿಂಟರ್ ವ್ಯವಸ್ಥೆ ಕಲ್ಪಿಸಿದ್ದಾರೆ.
ಇದಲ್ಲದೆ ಸುಮಾರು ₹30 ಸಾವಿರ ವೆಚ್ಚದಲ್ಲಿ ಸಿಸಿ ಕ್ಯಾಮೆರಾ, ದಾನಿಗಳ ನೆರವಿನಿಂದ ಸುಮಾರು ₹10 ಸಾವಿರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಸುಮಾರು ₹20 ಸಾವಿರ ವೆಚ್ಚದಲ್ಲಿ ರೆಫ್ರಿಜರೇಟರ್, ಇನ್ವರ್ಟರ್ ಹಾಗೂ ಸ್ಮಾರ್ಟ್ ಟಿವಿ ಸೇರಿದಂತೆ ಶಾಲೆಗೆ ಅಗತ್ಯವಿರುವ ವಿವಿಧ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಶ್ರಮಿಸಿದ್ದಾರೆ.
ಕಲಿಕೆಯೊಂದಿಗೆ ಕೈತೋಟದ ಪಾಠ
ಕಲಿಕೆಯನ್ನು ತರಗತಿ ಕೋಣೆಗೆ ಮಾತ್ರ ಸೀಮಿತಗೊಳಿಸದೆ, ವಿದ್ಯಾರ್ಥಿಗಳಿಗೆ ನೈಜ ಜೀವನದ ಅನುಭವ ನೀಡುವ ಉದ್ದೇಶದಿಂದ ಶಾಲಾ ಆವರಣದಲ್ಲಿ ಕೈತೋಟ ನಿರ್ಮಾಣ ಮಾಡಿಸಿರುವುದು ಸುಧಾ ಸಂದೇಶ್ ಅವರ ಮತ್ತೊಂದು ಗಮನಾರ್ಹ ಪ್ರಯತ್ನವಾಗಿದೆ. ಸುಮಾರು ₹20 ಸಾವಿರ ವೆಚ್ಚದಲ್ಲಿ ಶಾಲಾ ಜಾಗವನ್ನು ಸಮತಟ್ಟು ಮಾಡಿ ಬೇಲಿ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ತರಕಾರಿ ಬೆಳೆಸುವ ವ್ಯವಸ್ಥೆ ಮಾಡಿದ್ದಾರೆ. ತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸುವುದರ ಜೊತೆಗೆ ಹೆಚ್ಚುವರಿ ತರಕಾರಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕೃಷಿ, ಶ್ರಮ, ಸ್ವಾವಲಂಬನೆ ಮತ್ತು ನೈಜ ಜೀವನಾಧಾರಿತ ಕಲಿಕೆಯ ಅನುಭವ ನೀಡಲಾಗುತ್ತಿದೆ.
ಕ್ರೀಡೆ, ಸಾಹಿತ್ಯದಲ್ಲೂ ಸಾಧನೆ
ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಹಿತ್ಯ ಕ್ಷೇತ್ರದಲ್ಲೂ ಸುಧಾ ಸಂದೇಶ್ ಸಾಧನೆ ಮಾಡಿದ್ದಾರೆ. ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಥ್ರೋಬಾಲ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಕಲ್ಯಾಣ ನಿಧಿಯಿಂದ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಮೂಲಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ಬೆಳವಣಿಗೆ, ದಾನಿಗಳ ಸಹಭಾಗಿತ್ವ ಮತ್ತು ನೈಜ ಜೀವನಾಧಾರಿತ ಕಲಿಕೆಗೆ ಒತ್ತು ನೀಡಿ ಕಾರ್ಯನಿರ್ವಹಿಸುತ್ತಿರುವ ಸುಧಾ ಸಂದೇಶ್ ಅವರ ಸೇವೆಯನ್ನು ಗುರುತಿಸಿ ‘ಶಿವರಾಮ ಕಾರಂತ ಶಿಕ್ಷಕ ಪುರಸ್ಕಾರ-2026’ ನೀಡಿ ಗೌರವಿಸಲಾಗಿದೆ.

