ಮಂಗಳೂರು: ಶಿರಾಡಿ-ಸಂಪಾಜೆ ಘಾಟಿಯಲ್ಲಿ ಭೂ ಕುಸಿತದ ಪರಿಣಾಮ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಹೊರಡುವ ಶೇ.50ರಷ್ಟು ಪ್ರೀಮಿಯಂ ಬಸ್‌ ಸಂಚಾರ ರದ್ದುಗೊಂಡಿದೆ.

ಕೆಎಸ್ಸಾರ್ಟಿಸಿ ವಿಭಾಗದಿಂದ ಹೊರಡುವ ನಾನ್‌ ಎಸಿ ಸ್ಲೀಪರ್‌, ರಾಜಹಂಸ, ಸಾಮಾನ್ಯ ಸಾರಿಗೆ ಬಸ್‌ಗಳು ಚಾರ್ಮಾಡಿ ಮೂಲಕ ಸಂಚರಿಸುತ್ತದೆ. ಆದರೆ, ಕೆಎಸ್ಸಾರ್ಟಿಸಿ ಪ್ರೀಮಿಯಂ ಬಸ್‌ಗಳಾದ ಅಂಬಾರಿ ಉತ್ಸವ, ವೋಲ್ವೋ ಮಲ್ಟಿ ಆ್ಯಕ್ಸೆಲ್‌, ಡ್ರೀಮ್‌ಕ್ಲಾಸ್‌ ಸ್ಲಿàಪರ್‌ ಮಾದರಿಯ ಬಸ್‌ಗಳು ಚಾರ್ಮಾಡಿ ಘಾಟ್‌ ರಸ್ತೆಯ ಗುಣಮಟ್ಟಕ್ಕೆ ಆಧರಿಸಿ ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಶಿರಾಡಿ ಮಾರ್ಗವೊಂದೇ ಸಂಚಾರಕ್ಕೆ ಸೂಕ್ತ. ವಿಭಾಗದಿಂದ ಪ್ರತಿದಿನ ರಾತ್ರಿ ಹೊರಡುವ 40 ಪ್ರೀಮಿಯಂ ಬಸ್‌ಗಳ ಪೈಕಿ ಸುಮಾರು 20 ಬಸ್‌ ಮಾತ್ರ ಸದ್ಯ ಶಿರಾಡಿ ಮೂಲಕವೇ ಕಾರ್ಯಾಚರಿಸುತ್ತಿದೆ. ಉಳಿದ ಬಸ್‌ ಸಂಚಾರ ರದ್ದಾಗಿದೆ. ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಯಾವುದೇ ಪ್ರೀಮಿಯಂ ಬಸ್‌ ಸೇವೆ ಇರದ ಕಾರಣ ಯಾವುದೇ ಸಮಸ್ಯೆ ಇಲ್ಲ.

ಮಂಗಳೂರಿನಿಂದ ರಾತ್ರಿ ಸುಮಾರು 10.30, 11 ಗಂಟೆಗೆ ಹೊರಡುವ ಪ್ರೀಮಿಯಂ ಬಸ್‌ಗಳು ನಸುಕಿನ ಜಾವ ಸುಮಾರು 2ರಿಂದ 3 ಗಂಟೆ ವೇಳೆಗೆ ಶಿರಾಡಿಗೆ ತಲುಪುತ್ತದೆ. ಬೆಳಗ್ಗೆ 6 ಗಂಟೆ ಬಳಿಕ ವಾಹನ ಸಂಚಾರ ಆರಂಭವಾಗುವ ಕಾರಣ ಪ್ರಯಾಣಿಕರು 3 ಗಂಟೆಗಳ ಕಾಲ ಶಿರಾಡಿಯಲ್ಲಿ ಬಸ್‌ನಲ್ಲೇ ಕಾಲ ಕಳೆಯಬೇಕು. ಬೆಳಗ್ಗೆ 6 ಗಂಟೆಗೆ ಹೊರಟ ಬಸ್‌ ಬೆಂಗಳೂರಿಗೆ ತಲುಪುವಾಗ 11 ಗಂಟೆ ಸಮೀಪಿಸುತ್ತದೆ.

ಇದೇ ಕಾರಣಕ್ಕೆ ಕೆಎಸ್ಸಾರ್ಟಿಸಿಯಿಂದ ಪ್ರಯಾಣಿಕರಿಗೆ ಮೊದಲೇ ವಿಷಯ ತಿಳಿಸಿಯೇ ಬಸ್‌ಗೆ ಹತ್ತಿಸಲಾಗುತ್ತಿದೆ. ಆದರೆ ಬೆಂಗಳೂರಿನಿಂದ ಹೊರಡುವ ಬಸ್‌ಗಳು ಶಿರಾಡಿ ತಲುಪುವಾಗಲೇ ಮುಂಜಾನೆ 4 ಗಂಟೆ ಆಗುವ ಕಾರಣ ಅಷ್ಟೊಂದು ಸಮಸ್ಯೆ ಇಲ್ಲ ಎನ್ನುತ್ತಾರೆ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್‌ ಶೆಟ್ಟಿ.