ಮಂಗಳೂರು : ರಾಜ್ಯದಲ್ಲಿ ಬಿಪಿಎಲ್ ಆದಾಯ ಮಿತಿಯನ್ನು ರೂ. 3 ಲಕ್ಷಕ್ಕೆ ಏರಿಸಬೇಕು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಸಾಮಾಜಿಕ ಭದ್ರತಾ ಯೋಜನೆಗಳ ಏಕೀಕೃತ ಅರ್ಹತಾ ಮಾನದಂಡವನ್ನಾಗಿಸುವಂತೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸರಕಾರವನ್ನು ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃದ್ಧರು, ವಿಧವೆಯರು ಹಾಗೂ ಅಂಗವಿಕಲರಿಗೆ ಪಿಂಚಣಿ ನೀಡಲು ರಾಜ್ಯದಲ್ಲಿ ಇಂದಿಗೂ ರೂ.32,000 ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿರುವುದು ಸಂಪೂರ್ಣ ಅವೈಜ್ಞಾನಿಕ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ 3-4 ವರ್ಷಗಳಿಂದ ರೇಶನ್ ಕಾರ್ಡ್‌ಗಳ ವಿತರಣೆಯಾಗುತ್ತಿಲ್ಲ. ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ತಕ್ಷಣ ಪಡಿತರ ಚೀಟಿ ವಿತರಿಸಬೇಕು ಎಂದು ಆಗ್ರಹಿಸಿದರು.
.
ಜೀವನ ವೆಚ್ಚ ಹೆಚ್ಚಾಗಿರುವ ದಿನಗಳಲ್ಲಿ ದಿನಗೂಲಿ ಕಾರ್ಮಿಕರ ವಾರ್ಷಿಕ ಆದಾಯವೇ ರೂ.1.5 ರಿಂದ ರೂ.2 ಲಕ್ಷ ಮೀರಬಹುದು. ಇಂತಹ ಸಂದರ್ಭದಲ್ಲಿ ರೂ.32,000 ಆದಾಯ ಮಿತಿ ಹೇರುವುದು ಬಡವರನ್ನು ಸಾಮಾಜಿಕ ಭದ್ರತೆಯಿಂದ ಹೊರಗಿಡುವ ಅಮಾನವೀಯ ಕ್ರಮವಾಗಿದೆ ಎಂದರು.

ತೆಲಂಗಾಣದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರೂ.1.50 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ರೂ.2 ಲಕ್ಷದವರೆಗೆ ಆದಾಯ ಮಾನದಂಡವಿದೆ. ಹರಿಯಾಣಲ್ಲಿ ಫ್ಯಾಮಿಲಿ ಐಡಿ ಆಧಾರದಲ್ಲಿ ರೂ.3 ಲಕ್ಷದವರೆಗೆ ವಾರ್ಷಿಕ ಆದಾಯ ಮಿತಿ ಬಳಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಹೆಚ್ಚಿನ ಆದಾಯ ಮಿತಿಯೊಂದಿಗೆ ಸಾಮಾಜಿಕ ಭದ್ರತಾ ವ್ಯವಸ್ಥೆ ಜಾರಿಯಲ್ಲಿದೆ.

ಕರ್ನಾಟಕದಲ್ಲಿ ರೇಷನ್ ಕಾರ್ಡ್ ವಾರ್ಷಿಕ ಆದಾಯ ಮಿತಿಯನ್ನು ರೂ.1.20 ಲಕ್ಷದಿಂದ ರೂ.3 ಲಕ್ಷಕ್ಕೆ ಹೆಚ್ಚಿಸುವ ಪ್ರಸ್ತಾಪ ಸರಕಾರ ಮುಂದಿದೆ. ಆದರೆ ಪಿಂಚಣಿ ಯೋಜನೆಗಳಿಗೆ ಮಾತ್ರ ರೂ.32,000 ಮಿತಿಯನ್ನು ಮುಂದುವರಿಸಿರುವುದು ದ್ವಂದ್ವ ನೀತಿಯಾಗಿದೆ ಇದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ನುಡಿದರು.

ಕಲ್ಯಾಣ ಯೋಜನೆಗಳು ಜನರ ಹಕ್ಕಾಗಬೇಕೇ ಹೊರತು ದಾಖಲೆಗಳ ಹೆಸರಿನಲ್ಲಿ ಸರಕಾರಿ ಕಚೇರಿಗಳಿಗೆ ಅಲೆದಾಡಿಸುವ ವ್ಯವಸ್ಥೆಯಾಗಬಾರದು. ಸರಕಾರ ಈ ಕುರಿತು ತಕ್ಷಣ ನೀತಿ ನಿರ್ಧಾರ ಕೈಗೊಳ್ಳದಿದ್ದರೆ, ಎಸ್‌ಡಿಪಿಎಐ ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.

ಎಸ್‌ಡಿಪಿಐ ರಾಜ್ಯದ ನಾಲ್ಕನೇ ಬಲಿಷ್ಠ ಪಕ್ಷವಾಗಿದೆ. ಮುಂಬರುವ ಜಿಲ್ಲಾ, ತಾಲೂಕು ಪಂಚಾಯತ್ ಸೇರಿದಂತೆ ಸ್ಥಳೀಯಾಡಳಿತ, ವಿಧಾನ ಸಭಾ ಚುನಾವಣೆಯನ್ನು ಎದುರಿಸಲು ತಯಾರಿ ನಡೆಸುತ್ತಿದೆ ಎಂದು ನುಡಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಶ್ರಫ್ ಅದ್ಧೂರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಉಪಸ್ಥಿತರಿದ್ದರು.