ಮಂಗಳೂರು: ಖ್ಯಾತ ನಟ ಅನಂತನಾಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮತ್ತು ಸಮಾಜದಲ್ಲಿನ ನಿಂದನೆ/ಪ್ರತಿಭಟನೆಗಳ ಕುರಿತು ನೀಡಿದ ಹೇಳಿಕೆಗೆ ಕಾಂಗ್ರೆಸ್ ರಾಜ್ಯ ವಕ್ತಾರ ಎಂ.ಜಿ. ಹೆಗಡೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅನಂತನಾಗ್ ಅವರು ಪ್ರಸ್ತಾಪಿಸಿದ ಸಮಾಜದಲ್ಲಿನ ನಿಂದನೆ ಮತ್ತು ಟ್ರೋಲ್ ಮಾಡುವ “ಅಂಟು ರೋಗ” ಕುರಿತು ಮಾತನಾಡಿದ ಎಂ.ಜಿ. ಹೆಗಡೆ, “ಈ ಅಂಟು ರೋಗವನ್ನು ಸಮಾಜದಲ್ಲಿ ಮೊದಲು ಹರಡಿದ್ದೇ ಆರ್ಎಸ್ಎಸ್ ಮತ್ತು ಸಂಘ ಪರಿವಾರ.
1992ರ ನಂತರ ಈ ಸಂಸ್ಕೃತಿ ಪ್ರಾರಂಭವಾಯಿತು. 2013ರ ನಂತರ ಆರ್ಎಸ್ಎಸ್ನಲ್ಲಿದ್ದ ಈ ವೈರಸ್ ಇಡೀ ಸಮಾಜಕ್ಕೆ ಅಂಟು ರೋಗವಾಗಿ ಪರಿವರ್ತನೆಯಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷರ ಭಯೋತ್ಪಾದನೆ ಹಾಗೂ ಧ್ವನಿ ಭಯೋತ್ಪಾದನೆಯನ್ನು ಸಂಘ ಪರಿವಾರವೇ ಸೃಷ್ಟಿಸಿತು” ಎಂದು ನೇರ ಆರೋಪ ಮಾಡಿದರು.
”ಹಿಂದೆ ನಾವು ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿದಾಗಲೂ ರಮಾನಾಥ್ ರೈ, ಕೆ.ಎಸ್. ಮಸೂದ್ ಅವರಂತಹ ಹಿರಿಯ ಕಾಂಗ್ರೆಸ್ ನಾಯಕರು ಗೌರವದಿಂದ ಸ್ವೀಕರಿಸುತ್ತಿದ್ದರು. ಅಣ್ಣಾ ಹಜಾರೆ ಹೋರಾಟದ ಸಮಯದಲ್ಲೂ ಕಾಂಗ್ರೆಸ್ ಯಾರನ್ನೂ ದೇಶದ್ರೋಹಿ ಎಂದು ಕರೆಯಲಿಲ್ಲ. ಆದರೆ 2013ರ ನಂತರ ಪ್ರತಿಭಟಿಸುವ ರೈತರನ್ನು, ವಿದ್ಯಾರ್ಥಿಗಳನ್ನು, ಸಾಮಾಜಿಕ ಹೋರಾಟಗಾರರನ್ನು ‘ಅರ್ಬನ್ ನಕ್ಸಲ್’, ‘ದೇಶದ್ರೋಹಿ’ ಎಂದು ಕರೆಯುವ ಕಲ್ಚರ್ ತಂದದ್ದು ಯಾರು?” ಎಂದು ಅವರು ಪ್ರಶ್ನಿಸಿದರು.
”ಗಾಂಧೀಜಿ ಹಾಗೂ ನೆಹರೂ ಅವರ ಚಾರಿತ್ರ್ಯ ಹನನ ಮಾಡುವಾಗ, ಮಾಜಿ ಪ್ರಧಾನಿ ದೇವೇಗೌಡರನ್ನು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ನಿಮ್ಮ ಪಕ್ಷದವರೇ ಸಮಾಜದಲ್ಲಿ ಟ್ರೋಲ್ ಮಾಡುವಾಗ ಅನಂತನಾಗ್ ಅವರಿಗೆ ಈ ‘ಅಂಟು ರೋಗ’ ನೆನಪಾಗಲಿಲ್ಲವೇ? ನೀಟ್ (NEET) ಪರೀಕ್ಷೆಯ ಗೊಂದಲದಿಂದ 21 ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಾಗ, ಕರುಣೆಯಿಂದ ಅವರಿಗೆ ಧೈರ್ಯ ತುಂಬುವ ಒಂದೇ ಒಂದು ಹೇಳಿಕೆ ಕೊಡಲು ನಿಮಗೇಕೆ ಸಾಧ್ಯವಾಗಲಿಲ್ಲ?” ಎಂದು ಹೆಗಡೆ ಆಕ್ರೋಶ ಹೊರಹಾಕಿದರು.
’ಗುಡ್ ಗವರ್ನೆನ್ಸ್’ ಎಂದರೆ ಇದೇನಾ?
ಪ್ರಧಾನಿ ಮೋದಿ ಅವರ ‘ಗುಡ್ ಗವರ್ನೆನ್ಸ್’ (ಉತ್ತಮ ಆಡಳಿತ) ಪ್ರತಿಪಾದನೆಯನ್ನು ತಳ್ಳಿಹಾಕಿದ ಎಂ.ಜಿ. ಹೆಗಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗದಿರುವುದು ಗುಡ್ ಗವರ್ನೆನ್ಸ್?
- ದೇಶದ ಸಾಲದ ಹೊರೆ ಕೋಟ್ಯಂತರ ರೂಪಾಯಿಗೆ ಏರಿಕೆಯಾಗಿರುವುದು, ರೈತರ ಪಾದಯಾತ್ರೆಗೆ ರಸ್ತೆಯಲ್ಲಿ ಮೊಳೆ ಹೊಡೆಯುವುದು, ವಿದ್ಯಾರ್ಥಿಗಳ ಹೋರಾಟವನ್ನು ಬ್ಯಾರಿಕೇಡ್ ಹಾಗೂ ಕರೆಂಟ್ ಶಾಕ್ ಕೊಟ್ಟು ತಡೆಯುವುದು ರಾಜಧರ್ಮವೇ?
- ಇಡಿ, ಐಟಿ ದಾಳಿಗಳನ್ನು ನಡೆಸಿ ರಾಜಕೀಯ ನಾಯಕರನ್ನು ಹೆದರಿಸಿ, ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ದೇಣಿಗೆ ಪಡೆಯುವುದು ಉತ್ತಮ ಆಡಳಿತವೇ? ಎಂದು ಸಾಲು ಸಾಲು ಪ್ರಶ್ನೆಗಳನ್ನೆಸೆದರು.
ಕೊನೆಯದಾಗಿ, “ಹಿರಿಯ ಕಲಾವಿದರಾದ ಅನಂತನಾಗ್ ಅವರು ಇಡೀ ವಿಚಾರದ ಮೂಲ ಎಲ್ಲಿದೆ ಎಂಬುದನ್ನು ತಿಳಿದುಕೊಂಡು, ಸತ್ಯಕ್ಕೆ ಮುಖಾಮುಖಿಯಾಗಬೇಕು” ಎಂದು ಎಂ.ಜಿ. ಹೆಗಡೆ ಆಗ್ರಹಿಸಿದರು.

