ಮಂಗಳೂರು: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದ ಜನರು ಜೀವನ ನಿರ್ವಹಣೆ ಮಾಡಲು ಕಷ್ಟಪಡುವಂತಾಗಿದೆ ಎಂದು ಸಾರ್ವಜನಿಕ ಮಹಿಳೆ ವಜ್ರಾಕ್ಷಿ ಆರೋಪಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಲಿನ ದರವನ್ನು ಸುಮಾರು 8 ರೂ. ಹೆಚ್ಚಿಸಿರುವುದರಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿರುವುದಾಗಿ ಹೇಳುತ್ತಿರುವ ಸರ್ಕಾರ, ಇತರ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸುತ್ತಿದೆ ಎಂದು ಟೀಕಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ನೀಡುವುದಾಗಿ ಘೋಷಿಸಿದ್ದರೂ, ಅರ್ಹ ಫಲಾನುಭವಿಗಳ ಪೈಕಿ ಕೆಲವರಿಗೆ ಮಾತ್ರ ಹಣ ಬರುತ್ತಿದ್ದು, ಇನ್ನೂ ಹಲವರಿಗೆ ಹಣ ಪಾವತಿಯಾಗುತ್ತಿಲ್ಲ. ಏಳು, ಎಂಟು ಹಾಗೂ ಹತ್ತು ತಿಂಗಳು ಕಳೆದರೂ ಹಣ ಬಂದಿಲ್ಲ ಎಂದು ಅನೇಕ ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಅಂಗಡಿಗಳಿಗೆ ಹೋದಾಗ ಎಲ್ಲ ಸಾಮಗ್ರಿಗಳನ್ನು ಖರೀದಿಸಿ ಮನೆಗೆ ತರುವುದು ಕೂಡ ಕಷ್ಟಕರವಾಗಿದೆ. ಬಡವರ ಪರವಾಗಿ ಸರ್ಕಾರವಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ಬಡವರ ಸಂಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿ, ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಆಡಳಿತ ನಡೆಸಬೇಕು. ಬೆಲೆ ಏರಿಕೆ ಹಾಗೂ ವಿವಿಧ ಯೋಜನೆಗಳ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ, ಪ್ರಜೆಗಳಿಗೆ ಉತ್ತಮ ಆಡಳಿತ ನೀಡಬೇಕು ಎಂದು ವಜ್ರಾಕ್ಷಿ ಆಗ್ರಹಿಸಿದರು.