ಮಂಗಳೂರು : ಧರ್ಮಸ್ಥಳದ ಉಜಿರೆಯ 17 ವರ್ಷದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಚುರುಕುಗೊಳಿಸಿರುವ ನೂತನ ‘ವಿಶೇಷ ತನಿಖಾ ತಂಡ’ದ (SIT) ಹಿರಿಯ ಅಧಿಕಾರಿಗಳು, ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಅತ್ಯಂತ ಮಹತ್ವದ ‘ಕ್ರೈಂ ಸೀನ್ ರೀ-ಕ್ರಿಯೇಷನ್’ (ಅಪರಾಧ ಸ್ಥಳದ ಮರುಸೃಷ್ಟಿ) ಹಾಗೂ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ನಿರ್ದೇಶನದಂತೆ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ತಂಡಕ್ಕೆ ಮೂರು ತಿಂಗಳೊಳಗೆ ಅನುಸರಣೆ ವರದಿ (Compliance Report) ಸಲ್ಲಿಸುವ ಗಡುವು ಇರುವ ಹಿನ್ನೆಲೆಯಲ್ಲಿ ಈ ಪ್ರಮುಖ ತನಿಖಾ ಹೆಜ್ಜೆ ಇಡಲಾಗಿದೆ.
ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪವಿರುವ ಮಣ್ಣಸಂಕದಲ್ಲಿ 2012ರ ಅಕ್ಟೋಬರ್ 9ರಂದು ಸೌಜನ್ಯಾ ನಾಪತ್ತೆಯಾಗಿದ್ದ ಸ್ಥಳ ಹಾಗೂ ಮರುದಿನ ಆಕೆಯ ಮೃತದೇಹ ಭೀಕರವಾಗಿ ಪತ್ತೆಯಾಗಿದ್ದ ಅರಣ್ಯ ಪ್ರದೇಶಕ್ಕೆ ತನಿಖಾ ತಂಡ ಶನಿವಾರ ನೇರವಾಗಿ ಭೇಟಿ ನೀಡಿದೆ.
ಸ್ಥಳದಲ್ಲಿ ಎಸ್ಐಟಿ ತನಿಖಾಧಿಕಾರಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಲೋಕೇಶ್ ಜಗಲಾಸರ್, ಎಸಿಪಿ ಮನೋಜ್ ಕುಮಾರ್ ಅವರ ನೇತೃತ್ವದಲ್ಲಿ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡ, ಸೀನ್ ಆಫ್ ಕ್ರೈಮ್ ಆಫೀಸರ್ಸ್ (SOCO) ತಂಡ, ಸರ್ಕಾರಿ ವೈದ್ಯರ ತಂಡ, ಸ್ಥಳೀಯ ಗ್ರಾಮ ಆಡಳಿತಾಧಿಕಾರಿ (VA) ಹಾಗೂ ಲೋಕೋಪಯೋಗಿ ಇಲಾಖೆ (PWD) ಎಂಜಿನಿಯರ್ಗಳು ಜಂಟಿಯಾಗಿ ಕೂಲಂಕುಷ ಪರಿಶೀಲನೆ ನಡೆಸಿದ್ದಾರೆ.
ತನಿಖಾ ತಂಡ ಸ್ಥಳ ಮರುಸೃಷ್ಟಿ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ, 2012ರಲ್ಲಿ ಸೌಜನ್ಯಾ ಮೃತದೇಹ ಸಿಕ್ಕಾಗ ಪ್ರಥಮ ಬಾರಿಗೆ ಪೊಲೀಸರಿಗೆ ದೂರು ನೀಡಿದ್ದ ಆಕೆಯ ಮಾವ ಪುರಂದರ ಗೌಡ ಹಾಗೂ ಅಂದಿನ ಮಹಜರು ಪಂಚರು ಖುದ್ದಾಗಿ ಸ್ಥಳದಲ್ಲಿ ಉಪಸ್ಥಿತರಿದ್ದು, ಅಧಿಕಾರಿಗಳಿಗೆ ಅಂದಿನ ಪರಿಸ್ಥಿತಿ ಹಾಗೂ ಘಟನಾವಳಿಗಳ ವಿವರಣೆಯನ್ನು ನೀಡಿದರು.
2012ರ ಅಕ್ಟೋಬರ್ 9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾಳನ್ನು ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಪ್ರಕರಣದ ತನಿಖೆಯಲ್ಲಿ ಲೋಪಗಳು ಉಂಟಾಗಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ಹೊಸದಾಗಿ ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿ, ಮೂರು ತಿಂಗಳ ಗಡುವಿನಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ದೇಶಿಸಿತ್ತು. ಇದೀಗ ಮರುತನಿಖೆ ಚುರುಕುಗೊಂಡಿದ್ದು, ಎಸ್ಐಟಿ ಹೊಸ ಸಾಕ್ಷ್ಯಧಾರಗಳ ಕಲೆಹಾಕುವಿಕೆ ಹಾಗೂ ಸ್ಥಳ ಮರುಸೃಷ್ಟಿ ಮೂಲಕ ತನಿಖೆಗೆ ಹೊಸ ತಿರುವು ನೀಡಲು ಮುಂದಾಗಿದೆ.

