ಮಂಗಳೂರು: ಮಳೆ, ರಾಜ್ಯದಲ್ಲಿ ದೊಡ್ಡ ರೀತಿಯ ಹಾನಿ ಮಾಡಿದೆ. ಸಾವಿನ ಜೊತೆಗೆ ಹಲವು ರೀತಿಯಲ್ಲಿ ರಾಜ್ಯದಲ್ಲಿ ಹಾನಿ ಆಗಿದೆ. ನಾನು ಕಂದಾಯ ಸಚಿವ ಆಗಿದ್ದಾಗ ರಾಜ್ಯ ಹಾಗೂ ಕೇಂದ್ರದಿಂದ ಸಮಾನ ಅನುದಾನ ಕೊಡ್ತಾ ಇದ್ದೆವು ಎಂದು ರಾಜ್ಯ ಸರಕಾರದ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ಅವರು ಬಂಟ್ವಾಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹಿಂದೆ ನಮ್ಮ ಕಾಂಗ್ರೆಸ್ ಮಿತ್ರರು ಗಂಜಿಕೇಂದ್ರ ತೆರೀತಾ ಇದ್ದರು. ನಾನು ಅದನ್ನು ಬದಲಿಸಿ ಕಾಳಜಿ ಕೇಂದ್ರ ಮಾಡಿ ಮನೆ ಊಟ ಕೊಟ್ಟಿದ್ದೆ. ಆದರೆ ಈಗ ಅಂಥದ್ದು ಎಲ್ಲೂ ನಮಗೆ ಕಾಣಿಸ್ತಾ ಇಲ್ಲ. ಮಂಗಳೂರಿಗೆ ಉಸ್ತುವಾರಿ ಮಂತ್ರಿ ಬರದೇ 15 ದಿನ ಮೇಲಾಗಿದೆ ಅವರ ಹೈಕಮಾಂಡ್ ಜಿಲ್ಲಾ ಮಂತ್ರಿ ಸ್ಥಳದಲ್ಲಿರಲು ಹೇಳಿದ್ಯಂತೆ. ಆದರೆ ಎಲ್ಲೂ ಜಿಲ್ಲಾ ಮಂತ್ರಿಗಳು ಜನರ ಜೊತೆಗೆ ಕಾಣುತ್ತಿಲ್ಲ.
ರಮಾನಾಥ್ ರೈ ಅನ್ನೋ ಕಾಂಗ್ರೆಸ್ ಮುಖಂಡ ಆವತ್ತು ಪರಿಹಾರದ ವಿಚಾರದಲ್ಲಿ ಜಗಳ ಮಾಡಿದ್ದರು. ಸರ್ಕಾರ ಐದು ಲಕ್ಷ ಕೊಡೋದು ಕಂಜೂಸ್ ತನ ಅಂದಿದ್ದರು. ಆದರೆ ಈಗ ಇವರ ಸರ್ಕಾರ ಮೋದಿಯವರ 1.25 ಲಕ್ಷ ಕೊಡ್ತಾ ಇದೆ. ರಾಜ್ಯ ಸರ್ಕಾರ ಏನ್ ಕೊಡ್ತಾ ಇದೆ, ನಿಮಗೆ ನಾಚಿಕೆ ಇಲ್ವಾ?. ಹಾಗಿದ್ರೆ ಪ್ರವಾಹದ ವಿಚಾರದಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು?, ಈ ಸರ್ಕಾರ ಬದುಕಿದೆ ಅಂತ ಜನರಿಗೆ ಆಗ್ತಿಲ್ಲ, ಇದನ್ನು ಜನ ಗಮನಿಸ್ತಾ ಇದ್ದಾರೆ.
ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಪರಿಹಾರ ವಿತರಿಸಬೇಕು. ಮುಖ್ಯಮಂತ್ರಿ ದೆಹಲಿ ಪ್ರವಾಸ ಬಿಟ್ಟು ರಾಜ್ಯಕ್ಕೆ ಬರಲಿ. ನಿಮ್ಮ ಅಕ್ರಮಗಳಿಗೆ ಸ್ಪಷ್ಡನೆ ಕೊಡಲು ಅಲ್ಲಿಗೆ ಹೋಗಿದ್ದೀರಿ. ಅದೆಲ್ಲಾ ಮತ್ತೆ ಕೊಡಿ, ಮೊದಲು ರಾಜ್ಯದ ಜನರ ಸಮಸ್ಯೆ ಆಲಿಸಿ, ರಾಜ್ಯಾದ್ಯಂತ ಅಪಾರ ಹಾನಿ ಆಗಿದೆ, ಬೆಳೆ ಹಾನಿ ಆಗಿದೆ. ರಾಜ್ಯ ಸರ್ಕಾರ ಸಮಾರೋಪದಿಯಲ್ಲಿ ಕೆಲಸ ಮಾಡಬೇಕಿದೆ. ಶಾಸಕರ ನೇತೃತ್ವದ ಟಾಸ್ಕ್ ಪೋರ್ಸ್ ಮಾಡಿ ಅದಕ್ಕೆ ಹಣ ಬಿಡುಗಡೆ ಮಾಡಿ. ರಸ್ತೆ ಸೇರಿ ಬೇರೆ ಸಮಸ್ಯೆ ಸರಿ ಪಡಿಸಲು 5 ಕೋಟಿ ಅನುದಾನ ಕೊಡಿ ಎಂದರು.
ನಾನು ಮತ್ತು ಪಕ್ಷದ ಬೇರೆ ಬೇರೆ ನಾಯಕರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಆಗುತ್ತಿದೆ. ಏನು ತಪ್ಪಾಗಿದ್ಯೋ ಅದನ್ನ ಸರ್ಕಾರದ ಗಮನಕ್ಕೆ ತರ್ತಾ ಇದೇವೆ. ಇದೆಲ್ಲ ಮುಗಿದ ಮೇಲೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೀತಿನಿ. ನನ್ನ ಅವಧಿಯಲ್ಲಿ ಅರು ಸಾವಿರ ಕೋಟಿಗೂ ಹೆಚ್ಚು ಹಣ ಪ್ರವಾಹ ಪರಿಹಾರಕ್ಕೆ ಖರ್ಚು ಮಾಡಲಾಗಿದೆ. ಈ ಸರ್ಕಾರ ಹತ್ತು ರೂಪಾಯಿಯನ್ನೂ ಖಜಾನೆಯಿಂದ ಬಿಚ್ಚಿಲ್ಲ, ರಾಜ್ಯ ಸರಕಾರದ ವಿರುದ್ದ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

