ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಮುರ ಇಟ್ಟಿಗೆ (ಕೆಂಪು ಕಲ್ಲು) ಸಮಸ್ಯೆಯನ್ನು ವಾರದೊಳಗೆ ಬಗೆಹರಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಜುಲೈ 3ರಂದು ನಡೆಸಬೇಕಿದ್ದ ಪ್ರತಿಭಟನೆಯನ್ನು ಮುಂದೂಡಿದ್ದೇವೆ. ಒಂದು ವಾರದ ಬಳಿಕವೂ ಸಮಸ್ಯೆ ಬಗೆಹರಿಯದಿದ್ದರೆ ಮುಂದಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೆಂಪು ಮುರ ಇಟ್ಟಿಗೆ ಮಾಲಕರ ಒಕ್ಕೂಟ ಹೇಳಿದೆ.
ಜಿಲ್ಲೆಯಲ್ಲಿ ಕೆಂಪು ಮುರ ಇಟ್ಟೆಗೆ ತೆಗೆಯಲು ಪರವಾನಿಗೆ ಸರಳೀಕರಣ ಬಗ್ಗೆ ಜಿಲ್ಲಾಧಿಕಾರಿ ಜತೆ ಬುಧವಾರ ಸಭೆ ನಡೆದಿದೆ. ವಾರದೊಳಗೆ ಬೆಂಗಳೂರಿನಲ್ಲಿ ಗಣಿ ಸಚಿವರ ಸಮ್ಮುಖ ಉನ್ನತ ಮಟ್ಟದ ಸಭೆ ನಡೆದು ಸಮಸ್ಯೆಗೆ ಪರಿಹಾರ ರೂಪಿಸಲಾಗುವುದು ಎಂಬ ಭರವಸೆಯಂತೆ ಪ್ರತಿಭಟನೆ ಮುಂದೂಡಿದ್ದೇವೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಭಾಗದಲ್ಲಿ ಅನೇಕ ಜಾಗಗಳಿಂದ ಮುರ ಮಣ್ಣನ್ನು ಐಎಲ್ಎಂಎಸ್ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಯಾವುದೇ ಖನಿಜಾಂಶ ಇಲ್ಲದ ಕಾರಣ ಮಣ್ಣು ಪರೀಕ್ಷೆಗೆ ಒಳಪಡಿಸುವುದನ್ನು ರದ್ದುಗೊಳಿಸಬೇಕು. ಈಗಾಗಲೇ 3ಎ ಪರವಾನಿಗೆಯಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ತೆರಿಗೆಯ ಮೊತ್ತ 282 ರೂ. ಆಗಿದ್ದು, ಈ ತೆರಿಗೆಯ ಮೊತ್ತವನ್ನು ಪ್ರತಿ 1 ಟನ್ ಮುರ ಇಟ್ಟಿಗೆಗೆ ಕೇರಳ ರಾಜ್ಯ ತೆರಿಗೆಯ ಮಾದರಿಯಂತೆ 32 ರೂ. ನಿಗದಿಪಡಿಸಬೇಕು.
ಈಗಾಗಲೇ ನಿಗದಿಪಡಿಸಿರುವ ಪರವಾನಿಗೆಯ ಅವಧಿಯನ್ನು 6 ತಿಂಗಳಿನಿಂದ 2 ವರ್ಷದವರೆಗೆ ವಿಸ್ತರಿಸಬೇಕು, ಮುರ ಇಟ್ಟಿಗೆಯನ್ನು ಕಟ್ಟಡ ನಿರ್ಮಾಣಕ್ಕೆ ಮಾತ್ರ ಬಳಸುವ ಕಾರಣ ಇದು ಗಣಿಗಾರಿಕೆಯಾಗಿರುವುದಿಲ್ಲ. ಇದರಿಂದ ನಾವು ಯಾವುದೇ ಖನಿಜಾಂಶವನ್ನು ಹೊರ ತೆಗೆಯುವುದಿಲ್ಲ. ಅದ್ದರಿಂದ ತೆರಿಗೆಯನ್ನು ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

