ಮಂಗಳೂರು : ಮುಂಗಾರು ಈಗಾಗಲೇ ಕೇರಳಕ್ಕೆ ಪ್ರವೇಶಿಸಿದ್ದು ಜೂ. 4ರಿಂದ ಕರಾವಳಿಗೂ ಪ್ರವೇಶ ವಾಗುವ ಸಾಧ್ಯತೆ ಇರುವುದರಿಂದ ಕೃತಕ ನೆರೆ, ಪ್ರವಾಹ ಸೇರಿದಂತೆ ಪ್ರಾಕೃತಿಕ ವಿಕೋಪದ ಪರಿಸ್ಥಿತಿಗಳನ್ನು ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.
ಪಡೀಲ್‌ನ ಪ್ರಜಾಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ದ.ಕ. ಜಿಲ್ಲೆಯಲ್ಲಿ ಒಟ್ಟು 115 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ತಹಶೀಲ್ದಾರ್ ಹಂತದಲ್ಲಿ ವಿವಿಧ ತಾಲೂಕುಗಳಲ್ಲಿ ತುರ್ತು ಪರಿಹಾರ ಕ್ರಮಗಳಿಗಾಗಿ ಒಟ್ಟು ಜಿಲ್ಲೆಯಲ್ಲಿ 3.25 ಕೋಟಿ ರೂ. ಲಭ್ಯ ಇದ್ದು, ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದರು.
ಮುಂಗಾರು ಸಂದರ್ಭ ರಾತ್ರಿ ವೇಳೆ ಪ್ರಾಕೃತಿಕ ವಿಕೋಪಗಳಾದ ಸಂದರ್ಭ ಅಧಿಕಾರಿಗಳು ದೂರವಾಣಿ ಕರೆ ಎತ್ತುವುದಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ 24*7 ಮೊಬೈಲ್ ಕರೆಗಳನ್ನು ಡೈವರ್ಟ್ ಮಾಡುವ ಸೂಚನೆಯನ್ನು ನೀಡಲಾಗಿದೆ. ಯಾರಿಗೇ ಕರೆ ಬಂದಾಗ ಯಾರಾದರೂ ಅದನ್ನು ಸ್ವೀಕರಿಸಿ ತಕ್ಷಣ ಸಂಬಂಧಪಟ್ಟವರಿಗೆ ಸಂದೇಶ ಕಳುಹಿಸುವ ರೀತಿಯ ಪ್ರಯೋಗವನ್ನು ಮಾಡಲಾಗುತ್ತಿದೆ ಎಂದವರು ತಿಳಿಸಿದರು .
ಪಾಲಿಕೆಯ 60 ವಾರ್ಡ್‌ಗಳಿಗೆ ಇಂಜಿನಿಯರ್‌ಗಳನ್ನು, 223 ಗ್ರಾ.ಪಂ. ವ್ಯಾಪ್ತಿಯಲ್ಲಿ ಪಿಡಿಒಗಳು, 13 ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್‌ಗಳಾಗಿ ನೇಮಕ ಮಾಡಲಾಗಿದೆ. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ಇನ್ಸಿಡೆಂಟ್ ಕಂಮಾಂರ್‌ಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರ ಗಳಿಗೆ ಸ್ಪಂದಿಸುವುದು, ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಳಗೆ ನಿರಂತರ ಸಂಪರ್ಕದಲ್ಲಿರಲು ನಿರ್ದೇಶನ ನೀಡಲಾಗಿದೆ ಎಂದವರು ಹೇಳಿದರು.

