ಮಂಗಳೂರು: ಸೆಂಟ್ರಲ್ ಮತ್ತು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಈಗ ಹೆಚ್ಚಿನ ಪ್ರಯಾಣಿಕರು ಕಾರುಗಳ ಟ್ಯಾಕ್ಸಿ ಸೇವೆಯನ್ನು ಬಯಸುತ್ತಿದ್ದು, ನಿಲ್ದಾಣದಲ್ಲಿ ಪ್ರೀಪೇಯ್ದ ಟ್ಯಾಕ್ಸಿ ಸೇವೆ ಬೇಕು ಎಂಬ ಬೇಡಿಕೆ ಬಲವಾಗಿದೆ.

ನಗರದ ಸೆಂಟ್ರಲ್ ಮತ್ತು ಜಂಕ್ಷನ್ ಎರಡೂ ನಿಲ್ದಾಣಗಳಲ್ಲಿ ಟ್ಯಾಕ್ಸಿ ಸೇವೆ ಇದೆಯಾದರೂ ಪ್ರಯಾಣಿಕರಿಗೆ ಸರಿಯಾದ ಸೇವೆ ಲಭಿಸುತ್ತಿಲ್ಲ ఎంబ ಆರೋಪವಿದೆ. ಬಾಡಿಗೆ ನಿಗದಿ ವಿಚಾರದಲ್ಲಿ ತಗಾದೆ ಉಂಟಾಗುತ್ತಿದೆ. ಅದರಲ್ಲೂ ರಾತ್ರಿ ಹೊತ್ತು ಅಧಿಕ ಬಾಡಿಗೆ ವಸೂಲಿಯ ಆರೋಪವಿದೆ. ಇದನ್ನು ತಡೆಯಲು ಮತ್ತು ಪ್ರಯಾಣಿಕರಿಗೆ ಸರಿಯಾದ ಸೇವೆ ನೀಡಲು ಪ್ರೀಪೇಯ್ದ ಟ್ಯಾಕ್ಸಿ ವ್ಯವಸ್ಥೆ ಬೇಕು ఎంబ ಆಗ್ರಹವಿದೆ.

ಮುಖ್ಯವಾಗಿ ರಾತ್ರಿ ಸಮಯದಲ್ಲಿ ಈ ಸಮಸ್ಯೆ ಹೆಚ್ಚು. ಹಾಗಾಗಿ ಪ್ರೀ ಪೇಯ್ದ ಟ್ಯಾಕ್ಸಿ ಸೇವೆ ಬೇಕು ಎಂಬುದು ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ. ಈ ಬೇಡಿಕೆಗೆ ಅನೇಕ ಟ್ಯಾಕ್ಸಿ ಚಾಲಕರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ವ್ಯವಸ್ಥೆ ಅನುಷ್ಠಾನಗೊಂಡಿಲ್ಲ.

ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರಾತ್ರಿ 9.30ರ ಅನಂತರ ಪ್ರೀ ಪೇಯ್ದ ಆಟೋ ಕೂಡ ಲಭ್ಯವಿರುವುದಿಲ್ಲ. ಈ ಬಗ್ಗೆ ಈಗಾಗಲೇ ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಇದರೊಂದಿಗೆ ಪ್ರೀ ಪೇಯ್ದ ಟ್ಯಾಕ್ಸಿ ಕೌಂಟರ್ ಕೂಡ ಇಲ್ಲದೆ ಸಮಸ್ಯೆಯಾಗಿದೆ.