ಬಂಟ್ವಾಳ : ಇಲ್ಲಿನ ಪುರಸಭಾ ವ್ಯಾಪ್ತಿಯ ವಿವಿಧೆಡೆಯಲ್ಲಿ ಮನೆ, ಹೊಟೇಲ್, ಮಾಂಸದಂಗಡಿಯ ಕೊಳಚೆ ನೀರು, ತ್ಯಾಜ್ಯ ವಸ್ತುಗಳು ನೇರವಾಗಿ ಜಿಲ್ಲೆಯ ಜೀವನದಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುತ್ತಿರುವ ಹಿನ್ನಲೆಯಲ್ಲಿ ಮಂಗಳೂರು ಬೈಕಂಪಾಡಿಯಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರಾಧಿಕಾರಿ ನೇತೃತ್ವದ ತಂಡ ಶುಕ್ರವಾರ ನೇತ್ರಾವತಿ ನದಿತೀರದ ವಿವಿಧೆಡೆಗೆ ಭೇಟಿ ನೀಡಿ ಪರಿಶೀಲಿಸಿ ನೀರಿನ ಬಳಕೆಗೆ ಯೋಗ್ಯವಾಗಿದೆಯೇ ಎಂಬ ನಿಟ್ಟಿನಲ್ಲಿ ನೀರಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ.

ಮಂಗಳೂರು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರಾಧಿಕಾರಿ ಡಾ.ಮಂಜು ಆರ್.,ಸಹಾಯಕ ಸುನೀಲ್ ಕುಮಾರ್ ಹಾಗೂ ಪುರಸಭೆಯ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯ ನಿರೀಕ್ಷಕ ರತ್ನಪ್ರಸಾದ್ ಅವರು ಬಂಟ್ವಾಳ, ಪಾಣೆಮಂಗಳೂರು ಮತ್ತು ಬಿ.ಸಿ.ರೋಡಿನ ಪ್ರಮುಖ ಸ್ಥಳಗಳಲ್ಲಿ‌ ಮಲಿನ ನೀರು ಮತ್ತು‌ತ್ಯಾಜ್ಯ ವಸ್ತುಗಳು ನೇತ್ರಾವತಿ ನದಿಗೆ ಸೇರುವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಪುರಸಭಾ ವ್ಯಾಪ್ತಿಯ 12 ಸ್ಥಳಗಳಲ್ಲಿ ಮಲೀನ ನೀರು ನೇರವಾಗಿ ನೇತ್ರಾವತಿ ನದಿ ನೀರಿಗೆ ಸೇರುತ್ತಿದ್ದು, ಉಪಪರಿಸರಾಧಿಕಾರಿಯವರ ತಂಡ ಸುಮಾರು 6 ಕಡೆಗಳಿಗೆ ಭೇಟಿ ನೀಡಿ ನೀರಿನ ಸ್ಯಾಂಪಲ್ ಸಂಗ್ರಹಿಸಿ ಮಹಜರು ಕೂಡ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಂಟ್ವಾಳ ಬಡ್ಡಕಟ್ಟೆಯ ಮಾಂಸದಂಗಡಿಯ ಹಿಂಭಾಗ, ಬಿ.ಸಿ.ರೋಡಿನ ಪರ್ಲಿಯಾ, ಮಫತ್ ಲಾಲ್, ಆರಾಧ್ಯ‌ ಲೇಔಟ್ ಗಳು, ಬಸ್ತಿಪಡ್ಪು,ಕಂಚಿಕಾರ ಪೇಟೆ, ಗೂಡಿನ ಬಳಿ ಹಾಗೂ‌ ಪಾಣೆಮಂಗಳೂರಿನ ಭಾಗದಲ್ಲಿ ಭೇಟಿ ನೀಡಿ‌ ಪರಿಶೀಲಿಸಿದ್ದು, ಮಲೀನ ನೀರು ನೇರ ನೇತ್ರಾವತಿ ನದಿಗೆ ಸೇರುತ್ತಿರುವುದನ್ನು‌ ಕಂಡುಕೊಂಡಿದ್ದು,ಈ ಸಂಬಂಧ ಮಹಜರು‌ ಕೂಡ‌ ಮಾಡಿದ್ದಾರೆಂದು ತಿಳಿದುಬಂದಿದೆ. ನೀರು ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.