ಮಂಗಳೂರು : ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನದಲ್ಲಿ ಕುಡ್ಲದ ಪಿಲಿಪರ್ಬದ ಐದನೇ ಆವೃತ್ತಿ ಅ.18ರಂದು ನಗರದ ಕೇಂದ್ರ ಮೈದಾನದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಉದ್ಘಾಟನೆಗೊಂಡು 10 ಗಂಟೆಯಿಂದ ಹುಲಿವೇಷ ಸ್ಪರ್ಧೆ ಆರಂಭವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯ 11 ಹುಲಿವೇಷ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರತಿ ತಂಡಕ್ಕೆ 20 ನಿಮಿಷಗಳ ಪ್ರದರ್ಶನದ ಅವಕಾಶವಿದ್ದು, ವೈಭವದ ಮೆರವಣಿಗೆ, ಅಕ್ಕಿಮುಡಿ ಹಾಗೂ ವಿವಿಧ ಹುಲಿವೇಷಗಳ ಪ್ರದರ್ಶನ ಗಮನ ಸೆಳೆಯಲಿದೆ ಎಂದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹5 ಲಕ್ಷ, ದ್ವಿತೀಯ ₹3 ಲಕ್ಷ ಹಾಗೂ ತೃತೀಯ ₹2 ಲಕ್ಷ ನಗದು ಮತ್ತು ಸ್ಮರಣಿಕೆ ನೀಡಲಾಗುವುದು. ಭಾಗವಹಿಸುವ ಪ್ರತಿ ತಂಡಕ್ಕೆ ₹50 ಸಾವಿರ ಗೌರವಧನದ ಜೊತೆಗೆ ವೈಯಕ್ತಿಕ ಹಾಗೂ ವಿವಿಧ ವಿಭಾಗಗಳಲ್ಲಿಯೂ ಬಹುಮಾನ ನೀಡಲಾಗುತ್ತದೆ. ಆರು ಮಂದಿ ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದು, ವಿಡಿಯೋ ಪರಿಶೀಲನೆಯ ಮೂಲಕ ಪಾರದರ್ಶಕ ತೀರ್ಪು ನೀಡಲಾಗುವುದು.

ಐದು ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ಗ್ಯಾಲರಿ, ದೊಡ್ಡ ಪರದೆ, ನೇರ ಪ್ರಸಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳ್ಳಲಿದೆ.

ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರತಿಷ್ಠಾನದ ಪ್ರಮುಖರಾದ ಯತೀಶ್ ಬೈಕಂಪಾಡಿ, ಲಲಿತ್ ಮೆಂಡನ್, ನವನೀತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.