ಮಂಗಳೂರು : ಪಿಂಚಣಿ ಮತ್ತು ಗ್ರಾಚ್ಯುಟಿ ನೀಡಲು ಜನರ ಕರೆಂಟ್ ಬಿಲ್ಲಿನಲ್ಲಿ ಹಣ ಸಂಗ್ರಹಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ತೀವ್ರವಾಗಿ ಖಂಡಿಸಿದ್ದಾರೆ.

“ಪಿಂಚಣಿ ಕೊಡುವದು ತಪ್ಪಲ್ಲ. ಆದರೆ ಅದು ಸರ್ಕಾರದ ಬೊಕ್ಕಸದಿಂದ ಆಗಬೇಕು, ಜನರ ಜೇಬಿನಿಂದ ಅಲ್ಲ. ನಮ್ಮ (ಬಿಜೆಪಿ) ಸರ್ಕಾರದ ಅವಧಿಯಲ್ಲಿ ಒತ್ತಡವಿಲ್ಲದೆ ಈ ಪಿಂಚಣಿಯನ್ನು ನಿರ್ವಹಿಸಿದ್ದೇವೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ.”

ಆದೇಶ ನಮ್ಮದು ಅಲ್ಲ ಎಂಬ ಸರ್ಕಾರದ ಹೇಳಿಕೆ ಬಾಲಿಶವಾಗಿದೆ ಎಂದು ಅವರು ಟೀಕಿಸಿದರು. ₹900ಗೆ ಸಿಗಬಹುದಾದ ಸ್ಮಾರ್ಟ್ ಮೀಟರ್‌ಗಾಗಿ ₹10,000 ವಸೂಲಾಗಿ, ರಾಜ್ಯ ಹೈಕೋರ್ಟ್ ಕೂಡ ಛೀಮಾರಿ ಹಾಕಿರುವುದು ಸರ್ಕಾರದ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ.

“ಒಂದು ಕೈಯಲ್ಲಿ ಉಚಿತ ವಿದ್ಯುತ್ ಕೊಟ್ಟು, ಇನ್ನೊಂದು ಕೈಯಿಂದ ಹಣ ಕಿತ್ತುಕೊಳ್ಳುವುದು ಜನತೆಗೆ ಮೋಸ ಮಾಡುವುದು,” ಎಂದು ಕಾಮತ್ ಆಕ್ರೋಶ ವ್ಯಕ್ತಪಡಿಸಿದರು. ಮರಳು, ಕೆಂಪು ಕಲ್ಲು ಸಮಸ್ಯೆಯೂ ಬಿಗಡಾಯಿಸಿದೆ. ರಾಜ್ಯ ಸರ್ಕಾರ ಸ್ಪಂದಿಸದೆ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಸಂಪೂರ್ಣ ಕಡೆಗಣಿಸುತ್ತಿರುವುದು ಖಂಡನೀಯ.

ಅವರ ಜೊತೆಗೆ ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಮುರುಳಿ ಹೊಸಮಜಲು ಮತ್ತಿತರರು ಉಪಸ್ಥಿತರಿದ್ದರು.