ಮಂಗಳೂರು: ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಸಾದ್ವೀ ಶ್ರೀ ಶ್ರೀ ಮಾತಾನಂದಮಯೀಯವರ ಗೌರವ ಮಾರ್ಗದರ್ಶನದೊಂದಿಗೆ 2011ರಲ್ಲಿ ಪ್ರಾರಂಭವಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2024-2025ನೇ ಸಾಲಿನಲ್ಲಿ ಸಾರ್ವಕಾಲಿಕ ಸಾಧನೆಯನ್ನು ಮಾಡಿರುತ್ತದೆ. ಸಹಕಾರಿಯು 2024-2025ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.5.50 ಕೋಟಿ ಲಾಭ ಗಳಿಸಿದೆ, ಕಳೆದ ಸಾಲಿಗೆ ಹೋಲಿಸಿದರೆ 21% ಏರಿಕೆಯಾಗಿರುತ್ತದೆ.
ಸಹಕಾರಿಯ ಆಡಳಿತ ಕಛೇರಿಯಲ್ಲಿ ನಡೆದ ಅವಲೋಕನ ಸಭೆಯಲ್ಲಿ ಮಾತನಾಡಿದ ಸಹಕಾರಿಯ ಅಧ್ಯಕ್ಷ ಸಹಕಾರರತ್ನ ಶ್ರೀ ಲ| ಎ.ಸುರೇಶ್ ರೈ ಅವರು ವರದಿ ಸಾಲಿನಲ್ಲಿ ಸಹಕಾರಿಯು ರೂ.673.52 ಕೋಟಿ ವ್ಯವಹಾರವನ್ನು ದಾಖಲಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 22% ಏರಿಕೆಯನ್ನು ಕಂಡಿದೆ. ಸುಮಾರು 23 ಶಾಖೆಗಳ ಮೂಲಕ ರೂ.366.55 ಕೋಟಿ ಠೇವಣಿ ಸಂಗ್ರಹಿಸಿ, ರೂ.306.97 ಕೋಟಿ ಸಾಲ ಮತ್ತು ಮುಂಗಡಗಳೊAದಿಗೆ, ಪಾಲು ಬಂಡವಾಳ ರೂ.2.29 ಕೋಟಿ, ನಿಧಿಗಳು ರೂ.15.64 ಕೋಟಿ ಮತ್ತು ದುಡಿಯುವ ಬಂಡವಾಳ ರೂ.384.50 ಕೋಟಿಯನ್ನು ಹೊಂದಿರುತ್ತದೆ ಎಂದರು.
ಎಲ್ಲಾ ಶಾಖೆಗಳು ಗಣಕೀಕೃತಗೊಳಿಸಿ ಕೋರ್ ಸಿಸ್ಟಂ ಸಾಫ್ಟ್ವೇರ್ ಅಳವಡಿಸಿದೆ. ಪ್ರತಿ ವರ್ಷವು ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ `ಎ’ ಶ್ರೇಣಿಯನ್ನು ಪಡೆದಿದೆ. ಸಹಕಾರಿಯು ಕಳೆದ ವರ್ಷ ಸದಸ್ಯರಿಗೆ 21% ಡಿವಿಡೆಂಡ್ ನೀಡಿರುತ್ತದೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಉತ್ತಮ ಸೌಹಾರ್ದ ಪ್ರಶಸ್ತಿಯನ್ನು ಪಡೆದಿರುತ್ತದೆ.
ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 7874 ಒಡಿಯೂರು ವಿಕಾಸವಾಹಿಸಿ ಸ್ವ-ಸಹಾಯ ಗುಂಪುಗಳಲ್ಲಿ ಸುಮಾರು 64000ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಉಳಿತಾಯವನ್ನು ಮಾಡಿಕೊಂಡು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಸಾಲವನ್ನು ಪಡೆದು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿಕೊಂಡು ಸಂಸ್ಕಾರಯುತ ಜೀವನವನ್ನು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಸಹಕಾರಿಯ ಆಡಳಿತ ಕಛೇರಿ ಮತ್ತು ಪಂಪ್‌ವೆಲ್ ಶಾಖೆಯು ಮಂಗಳೂರಿನ ಪಂಪುವೆಲ್‌ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಸುಮಾರು 7000 ಚ.ಅ ವಿಶಾಲ ಕಟ್ಟಡ ಕೋಣೆಗಳನ್ನು ಸ್ವಂತಕ್ಕೆ ಖರೀದಿಸಿ, ಹವಾನಿಯಂತ್ರಿತ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ. ಸಹಕಾರಿಯ 5 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಸಹಕಾರಿಯ ಅಭಿವೃದ್ಧಿ ಮತ್ತು ಕೆಲಸದ ಕೌಶಲ್ಯಗಳನ್ನು ಗಮನಿಸಿ, ರಾಜ್ಯದ ಅನೇಕ ಸೌಹಾರ್ದ ಸಹಕಾರಿಗಳು ನಮ್ಮ ಸಂಸ್ಥೆಗೆ ಅಧ್ಯಯನ ಪ್ರವಾಸಕ್ಕೆ ಬರುತ್ತಿದ್ದು, ಅವರಿಗೆ ಮೌಲ್ಯಯುತವಾದ ತರಬೇತಿಗಳನ್ನು ನೀಡಲಾಗುತ್ತಿದೆ.
ಕೃಷಿ ಕೌಶಲ್ಯ ತರಬೇತಿ:
ಸಮಗ್ರ ಸುಸ್ಥಿರಕೃಷಿಯನ್ನು ಪ್ರೋತ್ಸಾಹಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತೆ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವಂತೆ ರೈತರಿಗೆ ಅವರ ಜಮೀನಿನಲ್ಲಿ ತೋಟದಲ್ಲಿ ಪಾಠ ಎನ್ನುವ ಶಿರೋನಾಮೆಯಲ್ಲಿ ಕೃಷಿ ವಿಜ್ಞಾನಿಗಳಿಂದ ತರಬೇತಿ ನೀಡಿ ರೈತರನ್ನು ಪ್ರೋತ್ಸಾಹಿಸಿರುವುದು ಮತ್ತು ಸಹಕಾರಿಯ ಸಿಬ್ಬಂದಿಗಳನ್ನು ಕೃಷಿ ವಿಜ್ಞಾನ ಕೇಂದ್ರ ಮೂಲಕ ಕೃಷಿ ವಿಷಯದಲ್ಲಿ ದೇಸಿ ಕೋರ್ಸ್ ಮೂಲಕ ತರಬೇತುಗೊಳಿಸಿ, ಸಿಬ್ಬಂದಿಗಳನ್ನು ಕೃಷಿಕರ ಸೇವೆಗೆ ಸಿದ್ಧಪಡಿಸಲಾಗುತ್ತಿದೆ.
ಉಪಾಧ್ಯಕ್ಷರಾದ ಶ್ರೀ ಲಿಂಗಪ್ಪಗೌಡ ಪನೆಯಡ್ಕ, ಶ್ರೀ ಲೋಕನಾಥ ಶೆಟ್ಟಿ ಮಂಗಳೂರು, ಶ್ರೀ ವೇಣುಗೋಪಾಲ ಮಾರ್ಲ, ಸೇರಾಜೆ ಶ್ರೀ ಗಣಪತಿ ಭಟ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್ ಹಾಗೂ ಹಿರಿಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.

