ಮಂಗಳೂರು : ಜೋಡಿಗೆ ಬೀಚ್ ನಲ್ಲಿದ್ದಾಗ ತೊಂದರೆ ಕೊಟ್ಟರೆಂಬ ಆರೋಪದಲ್ಲಿ ಸುರತ್ಕಲ್ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಾವಿಗೆ ಶರಣಾದ ಯುವಕನ ಶವ ಮುಂದಿಟ್ಟು ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ

ಎರಡು ದಿನಗಳ ಹಿಂದೆ ಕಾಸರಗೋಡಿನ ಯುವಕ ಮತ್ತು ದೆಹಲಿ ಮೂಲದ ಯುವತಿ ಹೊಸಬೆಟ್ಟು ಬಳಿಯ ಮೀನುಗಾರಿಕಾ ಜೆಟ್ಟಿಯಲ್ಲಿದ್ದಾಗ ಸ್ಥಳೀಯರು ಆಕ್ಷೇಪಿಸಿದ್ದರು. ಈ ವೇಳೆ, ಎರಡೂ ಕಡೆಯವರಿಂದ ವಾಗ್ವಾದ ನಡೆದಿತ್ತು. ಈ ಬಗ್ಗೆ ಯುವತಿಯ ದೂರಿನಂತೆ, ಹೊಸಬೆಟ್ಟು ನಿವಾಸಿ ಸೋಮನಾಥ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ವಿಚಾರಣೆಗೆ ಕರೆದಿದ್ದರು ಎನ್ನಲಾಗಿದೆ. ಆದರೆ ಇದರಿಂದ ಮನನೊಂದ ಸೋಮನಾಥ ಸೋಮವಾರ ಬೆಳಗ್ಗೆ ತನ್ನ ಸಾವಿಗೆ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೆ ಪೊಲೀಸರ ದೌರ್ಜನ್ಯ ಕಾರಣ, ವಿಚಾರಣೆಗೆ ಕರೆದು ದೌರ್ಜನ್ಯ ಮಾಡಿದ್ದಾರೆಂದು ಕೆಲವರು ಆರೋಪ ಹೊರಿಸಿದ್ದು ಮಂಗಳವಾರ ಸಂಜೆ ದಿಢೀ‌ರ್ ಆಗಿ ಶವವನ್ನು ಪೊಲೀಸ್ ಠಾಣೆ ಮುಂದೆ ತರಲಾಗಿದೆ. ನೂರಾರು ಮಂದಿ ಸ್ಥಳೀಯ ಮೊಗವೀರ ಯುವಕರು ಸೇರಿದ್ದು, ಸ್ಥಳಕ್ಕೆ ಶಾಸಕ ಭರತ್ ಶೆಟ್ಟಿ ಆಗಮಿಸಿ ಜನರ ಜೊತೆ ಸೇರಿ ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಹೆದ್ದಾರಿಯ ಬದಿಯಲ್ಲೇ ಪೊಲೀಸ್‌ ಠಾಣೆ ಇರುವುದರಿಂದ ಜನರು ಜಮಾಯಿಸಿದ ಕಾರಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗಿದೆ.

ಸೋಮನಾಥ ಕುಡಿತದ ಚಟ ಹೊಂದಿದ್ದು ಕುಡಿದ ಮತ್ತಿನಲ್ಲಿ ಅ.25ರಂದು ಬೀಚ್ ಬಳಿ ಅನುಮಾನಾಸ್ಪದ ತಿರುಗಾಡುತ್ತಿದ್ದ ಯುವ ಜೋಡಿಯನ್ನು ಪ್ರಶ್ನೆ ಮಾಡಿದ್ದರು. ಇದರ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದರಿಂದ ಮನನೊಂದು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಘಟನೆ ನೆಪದಲ್ಲಿ ಪೊಲೀಸರಿಗೆ ಸುಳ್ಳು ದೂರು ನೀಡಲಾಗಿದೆ. ರಾತ್ರಿ ವೇಳೆ ಬೀಚ್ ನಲ್ಲಿ ಗಾಂಜಾ ಡ್ರಗ್ಸ್ ಸೇವಿಸಿ ಅತಿರೇಕದ ವರ್ತನೆ ತೋರಿಸುತ್ತಾರೆ. ಇದಕ್ಕಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬಳಿಕ ಶಾಸಕ ಭರತ್ ಶೆಟ್ಟಿ ಸಾರ್ವಜನಿಕರು ಮತ್ತು ಪೊಲೀಸರ ಜೊತೆಗೆ ಮಾತನಾಡಿ ವಿಷಯ ಇತ್ಯರ್ಥಗೊಳಿಸಿದ್ದು ಎರಡೂ ಕಡೆಯಿಂದ ದೂರು ಪಡೆದು ದಾಖಲಿಸಲು ಸೂಚಿಸಿದ್ದಾರೆ.

ಪೊಲೀಸರು ಪ್ರತಿಕ್ರಿಯಿಸಿ, ಪೋಸ್ಟ್ ಮಾರ್ಟಂ ಬಳಿಕ ಶವವನ್ನು ಆಸ್ಪತ್ರೆಯಿಂದ ಹಿಂತಿರುಗಿ ಒಯ್ಯುತ್ತಿದ್ದಾಗ ಸುರತ್ಕಲ್ ಠಾಣೆ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಯುವ ಜೋಡಿಯ ವಿರುದ್ಧವೂ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಅದರಂತೆ, ದೂರು ನೀಡಲು ಹೇಳಿದ್ದು ಕೇಸು ದಾಖಲಿಸುವುದಾಗಿ ತಿಳಿಸಿದ್ದೇವೆ.