ಮಂಗಳೂರು: ಪುತ್ತೂರು – ಮಂಗಳೂರು ಮಾರ್ಗದಲ್ಲಿ ಶೀಘ್ರದಲ್ಲೇ ನಾನ್‌ಸ್ಟಾಪ್ ಬಸ್ ಸೇವೆ ಆರಂಭ ಆಗುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಪುತ್ತೂರಿನಿಂದ ನೇರವಾಗಿ ಮಂಗಳೂರಿಗೆ ತೆರಳುವ ಮತ್ತು ಮಂಗಳೂರಿನಿಂದ ನೇರವಾಗಿ ಪುತ್ತೂರಿಗೆ ಆಗಮಿಸುವ ಪ್ರಯಾಣಿಕರಿಗೆ ಇದರಿಂದ ಅನುಕೂಲ ಆಗಲಿದೆ. ಆರಂಭದಲ್ಲಿ 6 ಬಸ್‌ಗಳು ಸಂಚಾರ ನಡೆಸಲಿವೆ. ನಾನ್‌ಸ್ಟಾಪ್ ಬಸ್ ಸೇವೆಯಿಂದ ಪುತ್ತೂರಿನಿಂದ ಒಂದು ಗಂಟೆಯಲ್ಲಿ ಮಂಗಳೂರು ತಲುಪಲು ಸಾಧ್ಯ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿನಿಂದ ಬಂಟ್ವಾಳ- ಕಲ್ಲಡ್ಕ- ವಿಟ್ಲ- ಪುತ್ತೂರು -ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಅಂಬಾರಿ ಉತ್ಸವ ಹವಾ ನಿಯಂತ್ರಿತ ಬಸ್ ಸಂಚಾರ ನಡೆಸಲಿದೆ. ವಿಟ್ಲ ಭಾಗದ ಪ್ರಯಾಣಿಕರ ಬೇಡಿಕೆಯಂತೆ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಸಭೆಯಲ್ಲಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಆಮಲಿಂಗಯ್ಯ ಹೊಸ ಪೂಜಾರಿ, ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಜೈಶಾಂತ್, ಡಿಪೋ ಮ್ಯಾನೆಜರ್ ಸುಬ್ರಹ್ಮಣ್ಯ ಪ್ರಸಾದ ಉಪಸ್ಥಿತರಿದ್ದರು.
ಪುತ್ತೂರು ವಿಭಾಗಕ್ಕೆ 326 ಚಾಲಕ ಕಂ ನಿರ್ವಾಹಕರನ್ನು ನೇಮಿಸಲಾಗಿದೆ. 500 ಚಾಲಕ / ನಿರ್ವಾಹಕರನ್ನು ನೇಮಿಸುವಂತೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದು ಈ ಪೈಕಿ ಮೊದಲ ಹಂತದಲ್ಲಿ 326 ಸಿಬ್ಬಂದಿ ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೂಟ್‌ಗಳಲ್ಲಿ ಹೆಚ್ಚು ಬಸ್ ಓಡಾಡಲಿದೆ.
ಹೊಸದಾಗಿ ನೇಮಕವಾಗಿರುವ ಚಾಲಕ ಮತ್ತು ನಿರ್ವಾಹಕರು ಕನಿಷ್ಠ 5 ವರ್ಷ ಪುತ್ತೂರಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕೆಂಬ ಶರತ್ತನ್ನು ನೇಮಕಾತಿ ಪತ್ರದಲ್ಲಿ ವಿಧಿಸಲಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.

