ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ 14 ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೂನ್ಯ ಗೊಂಡಿದೆ.ಕಳೆದ ಮೂರು ವರ್ಷಗಳಿಂದಲೂ ಇಲ್ಲಿ ಶೂನ್ಯ ವಿದ್ಯಾರ್ಥಿಗಳಿದ್ದು, ಇದರಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳೂ ಸ್ಥಾನ ಪಡೆಯುತ್ತಿರುವುದು ಆತಂಕದ ಸಂಗತಿ. ಇಲಾಖೆಯ ಪ್ರಕಾರ ಮೂರು ವರ್ಷ ಕಾಯಬೇಕಾಗಿದ್ದು, ಆ ಬಳಿಕವೂ ವಿದ್ಯಾರ್ಥಿಗಳು ಪ್ರವೇಶ ಪಡೆಯದಿದ್ದರೆ ಶಾಶ್ವತವಾಗಿ ಮುಚ್ಚುವ ಸಾಧ್ಯತೆ ಇದೆ.
2024-25ನೇ ಸಾಲಿನಲ್ಲಿ ದ.ಕ.ದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ 14 ಶಾಲೆಗಳಿಗೆ ಒಬ್ಬ ವಿದ್ಯಾರ್ಥಿಯೂ ಸೇರಿಲ್ಲ. ಹಾಗೆಂದು ಈ ಶಾಲೆಗಳು ಅಧಿಕೃತವಾಗಿ ಮುಚ್ಚಿಲ್ಲ.
ಎಲ್ಲೆಲ್ಲಿ, ಎಷ್ಟೆಷ್ಟು?
ಸುಳ್ಯ ತಾಲೂಕಿನ 2, ಬಂಟ್ವಾಳ 2, ಬೆಳ್ತಂಗಡಿ 1, ಮಂಗಳೂರು ಉತ್ತರ 5, ಮೂಡಬಿದಿರೆ 1, ಮಂಗಳೂರು ದಕ್ಷಿಣದಲ್ಲಿ 3 ಶಾಲೆಗಳು ಶೂನ್ಯ ವಿದ್ಯಾರ್ಥಿಗಳ ಪಟ್ಟಿಯಲ್ಲಿವೆ. ಇವುಗಳ ಪೈಕಿ 2 ಸರಕಾರಿ, 6 ಅನುದಾನಿತ ಹಾಗೂ 6 ಖಾಸಗಿ ಶಾಲೆಗಳು.
2023-24ನೇ ಸಾಲಿನಲ್ಲಿ ದ.ಕ.ಜಿಲ್ಲೆಯಲ್ಲಿ ಶೂನ್ಯ ವಿದ್ಯಾರ್ಥಿಗಳಿದ್ದ ಶಾಲೆಗಳ ಸಂಖ್ಯೆ 13 ಆಗಿದ್ದು, ಈ ಬಾರಿ ಅದು14ಕ್ಕೆ ಏರಿಕೆ ಕಂಡಿದೆ. ಕಳೆದ ಬಾರಿ 3 ಸರಕಾರಿ ಶಾಲೆಗಳು ಈ ಪಟ್ಟಿಯಲ್ಲಿದ್ದರೆ, ಈ ಬಾರಿ ಅದು 2ಕ್ಕೆ ಇಳಿದಿದೆ

