ಮಂಗಳೂರು : ಮಹಿಳೆಯೊಬ್ಬರು ವಾಹನದ ಜತೆ ಗುಂಡಿಗೆ ಬಿದ್ದು ಮೃತಪಟ್ಟ ಪ್ರಕರಣ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ವಿರೋಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ, ಮೆರವಣಿಗೆ ಹಾಗೂ ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ ಯತ್ನ ನಡೆಯಿತು.

ಪ್ರತಿಭಟನೆಯ ವೇಳೆ ಅಣುಕು ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸುವ ಮೂಲಕ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ಸಿಗರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮೆರವಣಿಗೆಯ ಮೂಲಕ ನಂತೂರು ಸಮೀಪದ ಎನ್‌ಎಚ್‌ಎಐ ಕಚೇರಿಗೆ ಸಾಗಿದ ಪ್ರತಿಭಟನಾಕಾರರು ಅಲ್ಲಿ ಪೊಲೀಸ ಬಿಗಿ ಬಂದೋಬಸ್ತನ ನಡುವೆ ಮುತ್ತಿಗೆ ಯತ್ನ ನಡೆಸಿದಾಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್‌ ಆಳ್ವ ಸೇರಿದಂತೆ ಇತರ ನಾಯಕರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.

ಆರಂಭದಲ್ಲಿ ನಂತೂರು ವೃತ್ತ ಬಳಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ಸಿಗರು, ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಐವನ್ ಡಿಸೋಜಾ, ರಾಷ್ಟ್ರೀಯ ಹೆದ್ದಾರಿಗಳ ದುರಸ್ತಿಗಾಗಿ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದ್ದರೂ ದುರಸ್ತಿ ಕಾಯ ನಡೆದಿದಲ್ಲ. ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಕೇಂದ್ರ ಸರಕಾರದ್ದು ಆದರೆ ಇಂತಹ ರಸ್ತೆಯುದ್ದಕ್ಕೂ ಗುಂಡಿಗಳಿಂದಾಗಿ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ದೂರಿದರು.

ಮತೀಯ ಕಲಹಗಳ ಬಗ್ಗೆ ಪ್ರತಿಕ್ರಿಯಿಸುವ ಬಿಜೆಪಿ ಜನಪ್ರತಿನಿಧಿಗಳು ಇಂತಹ ನಿರ್ಲಕ್ಷ್ಯದಿಂದಾದ ಪ್ರಾಣ ಹಾನಿಗಳ ಬಗ್ಗೆ ಮಾತೆತ್ತುವುದಿಲ್ಲ ಕಳೆದ ಹಲವು ತಿಂಗಳಿನಿಂದ ರಾ.ಹೆದ್ದಾರಿಗಳ ಗುಂಡಿಗಳ ಬಗ್ಗೆ ಧ್ವನಿ ಎತ್ತಲಾಗಿದ್ದರೂ, ಪ್ರಾಣ ಕಳೆದುಕೊಂಡ ಮೇಲೆ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರಕಾರವು ಇತ್ತೀಚೆಗೆ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸೇರಿದಂತೆ ರಾ.ಹೆದ್ದಾರಿಯ ಅವ್ಯವಸ್ಥೆಯಿಂದ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬಳಿಕ ನಂತೂರು ವೃತ್ತದಿಂದ ಅಣುಕು ಮೃತದೇಹವನ್ನು ಹೊತ್ತುಕೊಂಡು ಎನ್‌ಎಚ್‌ಎಐ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ಸಿಗರು ಕಚೇರಿಗೆ ನುಗ್ಗಲು ಯತ್ನಿಸಿದಾಗ ಅದಾಗಲೇ ಬ್ಯಾರಿಕೇಡ್‌ಗಳನ್ನು ಅಳವಡಿಸಿ ನಿಂತಿದ್ದ ಪೊಲೀಸರು ತಡೆದರು. ಕೇಂದ್ರ ಸರಕಾರ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಾ ಬ್ಯಾರಿಕೇಡ್‌ಗಳನ್ನು ಸರಿಸಿ ಕಚೇರಿಗೆ ನುಗ್ಗಲು ಮುಂದಾದಾಗ ಪೊಲೀಸರು ತಡೆದು ನಾಯಕರನ್ನು ವಶಕ್ಕೆ ಪಡೆದರು.

ಈ ಸಂದರ್ಭ ಮಿಥುನ್ ರೈ ನೇತೃತ್ವದಲ್ಲಿ ಪ್ರತಿಭಟನಾ ನಿರತ ಕಾಂಗ್ರೆಸ್ಸಿಗರು ಅಣುಕು ಮೃತದೇಹವನ್ನು ಕಚೇರಿ ಆವರಣಕ್ಕೆ ಎಸೆಯುವ ಮೂಲಕ ಆಕ್ರೋಶ ಪ್ರದರ್ಶಿಸಿದರು. ಬಳಿಕ ಮಾತನಾಡಿದ ಮಿಥುನ್ ರೈ ಕಳೆದ ವಾರ ರಾ. ಹೆದ್ದಾರಿ ಗುಂಡಿಗೆ ಮಹಿಳೆ ಪ್ರಾಣ ಕಳೆದುಕೊಂಡ ಪ್ರಕರಣಕ್ಕೆ ಎನ್‌ಎಚ್‌ಎಐ, ಸ್ಥಳೀಯ ಸಂಸದರು ಹಾಗೂ ಬಿಜೆಪಿ ಜನಪ್ರತಿನಿಧಿಗಳು ನೇರ ಹೊಣೆ.

ಇದು ಅಸಹಜ ಸಾವು ಆಗಿದ್ದು, ಅಧಿಕಾರಿಗಳು ಹಾಗೂ ಬಿಜೆಪಿ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಂಭವಿಸಿದ್ದು ಇದನ್ನು ನಾವು ಖಂಡಿಸುತ್ತೇವೆ. ಪ್ರಾಣ ಕಳೆದುಕೊಂಡ ಮಹಿಳೆಯ ಕುಟುಂಬದ ಜತೆ ನಾವು ನಿಂತಿದ್ದು ಕೇಂದ್ರ ಸರಕಾರ ಮೃತ ಮಹಿಳೆಯ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರಲ್ಲದೆ, ರಾ.ಹೆದ್ದಾರಿಯ ಎಲ್ಲಾ ಗುಂಡಿಗಳು ಮುಚ್ಚುವವರೆಗೆ ನಮ್ಮ ಈ ಪ್ರತಿಭ ಮುಂದುವರಿಯಲಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಜೆ.ಆ‌ರ್. ಲೋಬೋ, ಮಮತಾ ಗಟ್ಟಿ, ಅಪ್ಪಿ ಶ್ಯಾಲೆಟ್ ಪಿಂಟೋ, ಶಶಿಧರ ಹೆಗ್ಡೆ ತಾಹುಲ್ ಹಮೀದ್, ಎಂ.ಎಸ್. ಮುಹಮ್ಮದ್, ಅನಿಲ್ ಕುಮಾರ್, ಪ್ರವೀಣ್ ಚಂದ್ರ ಆಳ ವಿನಯರಾಜ್, ಹರಿನಾಥ್, ಭಾಸ್ಕರ ಕೆ., ಡೆನ್ನಿಸ್ ಡಿಸಿಲ್ವಾ ಮೊದಲಾದವರು ಉಪಸ್ಥಿತರಿದ್ದರು.