ಮಂಗಳೂರು: 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ತನ್ನ ಅಂತರರಾಷ್ಟ್ರೀಯ ಸಂಘಟನಾ ವಿಸ್ತರಣೆಯ ಭಾಗವಾಗಿ ಕತಾರ್, ಒಮಾನ್ ಹಾಗೂ ನೈಜೀರಿಯಾ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕಗೊಳಿಸಿದೆ.
ಕತಾರ್ ಘಟಕದ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ಎ.ಟಿ.ಎಸ್. ಗ್ರೂಪ್ ಕತಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಮೂಡಂಬೈಲ್ ರವಿ ಶೆಟ್ಟಿ, ಒಮಾನ್ ಘಟಕದ ಅಧ್ಯಕ್ಷರಾಗಿ ಉದ್ಯಮಿ, ಸಮಾಜಸೇವಕ ಹಾಗೂ Abeer Group of Companies ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಲ್ಲಾರ್ ಶಶಿಧರ ಶೆಟ್ಟಿ ಮತ್ತು ನೈಜೀರಿಯಾ ಘಟಕದ ಅಧ್ಯಕ್ಷರಾಗಿ ಖ್ಯಾತ ಹರಿಕಥಾ ಪ್ರವಚನಕಾರ, ಯಕ್ಷಗಾನ ಭಾಗವತ, ಸಮಾಜಸೇವಕ ಹಾಗೂ Everest Metals Nigeria Limited ಸಂಸ್ಥೆಯ ಖರೀದಿ ಪ್ರಬಂಧಕರಾದ ಶ್ರೀ ಶರತ್ ಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಡಾ. ರವಿ ಶೆಟ್ಟಿ ಅವರು ಕಳೆದ ಎರಡೂವರೆ ದಶಕಗಳಿಂದ ಕತಾರ್‌ನಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಸಂಘ ಕತಾರ್ ಅಧ್ಯಕ್ಷರು, ತುಳುಕೂಟ ಕತಾರ್ ಮಹಾಪೋಷಕರು ಹಾಗೂ ಮಾಜಿ ಅಧ್ಯಕ್ಷರು, ಬಂಟ್ಸ್ ಕತಾರ್ ಸಂಸ್ಥಾಪಕ ಅಧ್ಯಕ್ಷರು ಸೇರಿದಂತೆ ಹಲವು ಸಂಘ-ಸಂಸ್ಥೆಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಸಮಾಜಸೇವೆ, ಕನ್ನಡ-ತುಳು ಸಂಸ್ಕೃತಿಯ ಪ್ರಚಾರ ಹಾಗೂ ಉದ್ಯಮಶೀಲತೆಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಲ್ಲಾರ್ ಗ್ರಾಮದ ಮೂಲದ ಶ್ರೀ ಮಲ್ಲಾರ್ ಶಶಿಧರ ಶೆಟ್ಟಿ ಅವರು ಒಮಾನ್‌ನ Abeer Group of Companies ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಳೆದ ಐದು ದಶಕಗಳಿಂದ ಸಮಾಜಸೇವೆ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು, ಮಹಾದೇವಿ ಕಲ್ಚರಲ್ ಕ್ಲಬ್, ಶ್ರೀ ಅಯ್ಯಪ್ಪ ಸೇವಾ ಸಮಿತಿ ಮಸ್ಕತ್, ಬಾಲಭಾರತಿ ಸ್ಟಡಿ ಕೇಂದ್ರ ಸೇರಿದಂತೆ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ಮುನ್ನಡೆಸಿದ್ದಾರೆ. ಭಾರತೀಯ ಪ್ರವಾಸಿ ಮಂಚ್–ಕರ್ನಾಟಕ ಘಟಕದ ಅಧ್ಯಕ್ಷರು, ಒಮಾನ್ ಬಂಟ್ಸ್ ಸಂಘದ ಸಂಸ್ಥಾಪಕ ಸದಸ್ಯರು ಹಾಗೂ ತುಳು ಲಿಪಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ.
ಮಂಗಳೂರು ಸಮೀಪದ ಪಡು ನೀರುಮಾರ್ಗದ ಪಡುಪಳ್ಳಿ ಮೂಲದ ಶ್ರೀ ಶರತ್ ಕುಮಾರ್ ಶೆಟ್ಟಿ ಅವರು ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್‌ನಲ್ಲಿ ಡಿಪ್ಲೊಮಾ ಪದವೀಧರರಾಗಿದ್ದು, ಪ್ರಸ್ತುತ ನೈಜೀರಿಯಾದ Everest Metals Nigeria Limited ಸಂಸ್ಥೆಯಲ್ಲಿ ಖರೀದಿ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನ ಭಾಗವತ, ಹರಿಕಥಾ ಪ್ರವಚನಕಾರ, ಕವಿ, ಲೇಖಕ ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಅವರು ನೈಜೀರಿಯಾದಲ್ಲಿ ಕರ್ನಾಟಕ ಸಂಘ ಕಾನೋ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡ ಮತ್ತು ತುಳು ಭಾಷೆ-ಸಂಸ್ಕೃತಿಯ ಪ್ರಚಾರಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ಭಾರತೀಯರ ಸಾಂಸ್ಕೃತಿಕ ಸಮಿತಿ (Indian Cultural Association, Kano), Hindu Swayamsevak Sangh (HSS) ಹಾಗೂ Seva International ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರ ಸಂಘಟನಾ ಸಾಮರ್ಥ್ಯ, ಸಮಾಜಸೇವೆ ಹಾಗೂ ತುಳು ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಉಳಿವು-ಬೆಳವಣಿಗೆಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಈ ನೇಮಕಾತಿಗಳನ್ನು ಘೋಷಿಸಿದ್ದಾರೆ.
ಈ ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷರಾದ ಶ್ರೀ ಶ್ರೀಹರಿನಾರಾಯಣ ದಾಸ್ ಅಸ್ರಣ್ಣ, ಅಧ್ಯಕ್ಷೆ ಶ್ರೀಮತಿ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ಶ್ರೀ ವಸಂತ ರೈ ಕುತ್ತೇತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ ಹಾಗೂ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ಶ್ರೀ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ. ಆರ್. ಆಳ್ವ, ಕೇಂದ್ರೀಯ ಸಮಿತಿ ಕಾರ್ಯದರ್ಶಿ ಶ್ರೀ ಅರವಿಂದ್ ಬೆಲ್ಚಾಡ ಮತ್ತು ಕೇಂದ್ರೀಯ ಸಮಿತಿ ಸಂಚಾಲಕ ಶ್ರೀ ವಿಶ್ವನಾಥ ಆಚಾರ್ಯ ಅವರು ಹರ್ಷದಿಂದ ಸ್ವಾಗತಿಸಿ, ನೂತನ ಅಧ್ಯಕ್ಷರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ.

