ಮಂಗಳೂರು: ಉಳ್ಳಾಲ ದರ್ಗಾ ಸಮಿತಿಯ ವಕ್ಸ್ ಚುನಾಯಿತವಾದ 55 ಸದಸ್ಯರುಗಳಲ್ಲಿ 30 ಕ್ಕೂ ಹೆಚ್ಚಿನ ಸದಸ್ಯರು ನಮ್ಮ ಪರವಾಗಿ ಇದ್ದು, ಆಡಳಿತ ವರ್ಗಕ್ಕೆ ಅವರಿಗೆ ಬೇಕಾದ ಬಹುಮತವಿಲ್ಲದೆ ದಬ್ಬಾಳಿಕೆಯ ಭ್ರಷ್ಟ ಆಡಳಿತ ನಡೆಸುತ್ತಿದ್ದಾರೆ.

ಎರಡುವರೆ ವರ್ಷದಲ್ಲಿ ಹನೀಫ್ ಹಾಜಿ ಮತ್ತು ಪದಾಧಿಕಾರರಿಗಳು ಮಾಡಿದ ಭ್ರಷ್ಟಾಚಾರಕ್ಕೆ ಇಡೀ ಸಮಿತಿ ಸದಸ್ಯರು ತಲೆ ತಗ್ಗಿಸುವ ಪರಿಸ್ಥಿತಿ ಎದುರಾಗಿದೆ. ನಮ್ಮ ಶಾಸಕರು ಸರಕಾರದದಿಂದ ಅನುದಾನ, ವಿವಿಧ ಇಲಾಖೆಗಳಿಂದ ದರ್ಗಾಕ್ಕೆ 7 ಕೋಟಿಗೂ ಹೆಚ್ಚಿನ ಹಣ ಮಂಜೂರು ಮಾಡಿದರೂ ಸರಿಯಾದ ಲೆಕ್ಕಾಚಾರ ನಮಗೂ ಮತ್ತು ವಕ್ಸ್ ಗೆ ತೋರಿಸದೆ ಇವರು ಲೂಟಿ ಮಾಡಿ ತನ್ನ ಜೇಬು ತುಂಬಿಸಿದ್ದಾರೆ.

ಉಳ್ಳಾಲ ಖಾಝಿಯವರು ಸ್ಪಷ್ಟವಾಗಿ ಹೇಳಿರೋದು 2 ವಾರಕ್ಕೆ ಒಮ್ಮೆ ಸಮಿತಿ ಸದಸ್ಯರ ಮೀಟಿಂಗ್ ಮಾಡಿ ತಿಂಗಳಿಗೆ ಒಮ್ಮೆ ಲೆಕ್ಕಾಚಾರ ಕೊಡಬೇಕು, ಆದರೂ ಎಲ್ಲವನ್ನು ಗಾಳಿಗೆ ತೋರಿ ಯಾರ ಮಾತನ್ನು ಕೇಳದೆ ದಬ್ಬಾಳಿಕೆಯ ಆಡಳಿತ ನಡೆಸುತ್ತಿದ್ದಾರೆ. ವಕ್ಸ್ ಗೆ ಸಾರ್ವಜನಿಕ ಹಿತಾಸಕ್ತಿ RTI ಅಡಿಯಲ್ಲಿ ನಮಗೆ ಬೇಕಾದ ಪೂರ್ಣ ಮಾಹಿತಿ ನೀಡಲು ವಕ್ಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

ವಕ್ಸ್ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರು ಇವರೊಂದಿಗೆ ಶಾಮೀಲಾಗಿರುವ ಶಂಕೆ ನಮಗಿದೆ. ದರ್ಗಾದ ಆಡಳಿತ ವಹಿಸಿಕೊಳ್ಳಲು ನಮಗೆ 30 ಕ್ಕೂ ಹೆಚ್ಚು ಸದಸ್ಯರ ಬೆಂಬಲಿಗರಿದ್ದಾರೆ. ಕರ್ನಾಟಕ ಸರಕಾರದ ಪಕ್ಸ್ ಇಲಾಖೆಗೆ ಒಳಪಟ್ಟಿರುವ ಉಳ್ಳಾಲ ಸಯ್ಯದ್ ಮದನಿ ದರ್ಗಾ ಮತ್ತು ಉಳ್ಳಾಲ ಜುಮಾ ಮಸೀದಿ ಇತಿಹಾಸ ಪ್ರಸಿದ್ಧ ಮತ್ತು ಸರ್ವ ಜನಾಂಗದವರು ನಂಬುವ ಕರಾವಳಿ ಜಿಲ್ಲೆಯ ಶ್ರೇಷ್ಠ ಪರಂಪರೆಯುಳ್ಳ ಕ್ಷೇತ್ರವಾಗಿದೆ. ಆದರೆ ಈ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಆಡಳಿತ ವಹಿಸಿಕೊಂಡ ಬಿ.ಜಿ ಹನೀಫ್ ಮತ್ತು ಆಡಳಿತ ಪದಾಧಿಕಾರಿಗಳು ಸ್ವಜನ ಪಕ್ಷಪಾತ ಮತ್ತು ನಿರಂತರ ಭ್ರಷ್ಟಾಚಾರ ನಡೆಸುತ್ತಿದ್ದಾರೆ.

ದರ್ಗಾ ಕಮಿಟಿಯಲ್ಲಿ 55 ಮಂದಿ ಸದಸ್ಯರಿದ್ದರೂ, ಕೇವಲ ಏಳೆಂಟು ಜನರು ಸೇರಿ ದಬ್ಬಾಳಿಕೆಯ ಸರ್ವಾಧಿಕಾರ ನಡೆಸುತ್ತಿದ್ದಾರೆ. ಅಲ್ಲದೆ, ತಮಗೆ ಬೇಕಾದಂತೆ ನಿರ್ಣಯಗಳನ್ನು ಮಾಡಿಕೊಳ್ಳುತ್ತಿದ್ದು, ಖರ್ಚು ವೆಚ್ಚದ ಲೆಕ್ಕ ತೋರಿಸದೆ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಆಡಳಿತ ವಹಿಸಿಕೊಂಡು ಎರಡು ವರ್ಷ ಕಳೆದರೂ ಒಂದು ಬಾರಿಯೂ ಮಹಾಸಭೆ ನಡೆಸಿಲ್ಲ. ಲೆಕ್ಕಪತ್ರಗಳ ಬಗ್ಗೆ ಪ್ರಶ್ನಿಸಿದ ದರ್ಗಾ ಕಮಿಟಿಯ 30ಕ್ಕೂ ಹೆಚ್ಚು ಸದಸ್ಯರನ್ನು ಉಚ್ಚಾಟಿಸುವ ಬೆದರಿಕೆ ಹಾಕಿ, ಯಾವುದೇ ಸಭೆಗಳಿಗೂ ಕರೆಯದೇ ದೂರ ಇಟ್ಟಿದ್ದಾರೆ.

2024 ಎಪ್ರಿಲ್ ತಿಂಗಳಲ್ಲಿ ನಡೆದ ಉರೂಸ್ ಕಾರ್ಯಕ್ರಮಕ್ಕೆ ಮತ್ತು ಹಾಸ್ಟೆಲ್ ಕಟ್ಟಡಕ್ಕೆ ರಾಜ್ಯ ಸರಕಾರದಿಂದ ರೂಪಾಯಿ ಆರು ಕೋಟಿ ಅನುದಾನ ಸೇರಿದಂತೆ ದಾನಿಗಳಿಂದ ಕೋಟ್ಯಂತರ ರೂಪಾಯಿ ಕಲೆಕ್ಷನ್ ಆಗಿದೆ. ಉಳ್ಳಾಲ ಉರೂಸ್ ಕಳೆದು 8 ತಿಂಗಳಾದರೂ, ಈ ಬಗ್ಗೆ ಕಲೆಕ್ಷನ್ ಆಗಿರುವ ಮೊತ್ತವೆಷ್ಟು, ಖರ್ಚಾದ ಮೊತ್ತವೆಷ್ಟು ಎಂಬ ಬಗ್ಗೆ ಮಾಹಿತಿ ಸರಕಾರಕ್ಕೂ ಮತ್ತು ದರ್ಗಾದ ಸಮಿತಿ ಸದಸ್ಯರಿಗೆ ನೀಡಿಲ್ಲ.

30ಕ್ಕೂ ಹೆಚ್ಚು ಸದಸ್ಯರ ವಿರೋಧವನ್ನು ಲೆಕ್ಕಿಸದೆ ತಮಗೆ ಬೇಕಾದ ರೀತಿ ನಿರ್ಣಯಗಳನ್ನು ಮಾಡುತ್ತಿದ್ದಾರೆ. ದರ್ಗಾ ಕಮಿಟಿಗೆ ಒಳಪಟ್ಟ ಕಟ್ಟಡ ಇನ್ನಿತರ ಕಾಮಗಾರಿಗಳಿಗೆ ಟೆಂಡರ್ ಕರೆಯದೇ ತಮಗೆ ಬೇಕಾದವರಿಗೆ ಗುತ್ತಿಗೆ ನೀಡಿದ್ದಾರೆ. ಶಿಕ್ಷಣ ಉದ್ದೇಶದ ಕಟ್ಟಡವೊಂದನ್ನು ಸರಕಾರದ ಅನುದಾನದಲ್ಲಿ ನಿರ್ಮಿಸಲಾಗುತ್ತಿದ್ದು, ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆಯನ್ನು ನೀಡಿದ್ದು ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿ ವಕ್ಸ್ ನಿಯಮಗಳನ್ನು ಗಾಳಿಗೆ ತೂರಿ, ಸದಸ್ಯರ ಒಮ್ಮತ ಅಭಿಪ್ರಾಯಗಳಿಗೆ ಮಾನ್ಯತೆ ನೀಡದೆ ಬೇಕಾ ಬಿಟ್ಟಿ ನಿರ್ಣಾಯಗಳನ್ನು ಬರೆದು ಸಮಿತಿ ಸದಸ್ಯರನ್ನು ವಂಚಿಸಿ ವಕ್ಸ್ ಗೆ ಮತ್ತು ದರ್ಗಾಕ್ಕೆ ದ್ರೋಹ ಬಗೆಯುತ್ತಿದ್ದಾರೆ.

ಸರಕಾರದ ಅನುದಾನದ ಹೆಸರಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಯಾಣದ ವೆಚ್ಚ ಮತ್ತು ಇನ್ನಿತರ ಖರ್ಚು ವೆಚ್ಚ ಎಂದು ಹೇಳಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಮಾಡಿ ಗುಳುಂ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ 30ಕ್ಕೂ ಹೆಚ್ಚು ಸದಸ್ಯರನ್ನು ದರ್ಗಾದ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ. ಇದೆಲ್ಲದರ ಬಗ್ಗೆ ವಕ್ಸ್ ಗೆ ದೂರು ಕೊಟ್ಟಿದ್ದೇವೆ. RTI ನಲ್ಲಿ ಸಾರ್ವಜನಿಕರು ಕೇಳಿದ ಮಾಹಿತಿಗೆ ಉಳ್ಳಾಲ ದರ್ಗಾ ಸಮಿತಿ ಸಮರ್ಪಕವಾದ ಮಾಹಿತಿ ನೀಡದೆ ವಂಚಿಸುತ್ತಿದ್ದಾರೆ. ದರ್ಗಾದ ಭ್ರಷ್ಟಾಚಾರ ಮತ್ತು ಸರ್ವಾಧಿಕಾರದ ಬಗ್ಗೆ ನಮ್ಮ ಸ್ಥಳೀಯ ಶಾಸಕರ ಗಮನಕ್ಕೆ ಕೂಡ ತಂದಿದ್ದೇವೆ.

ಹಾಲಿ ದರ್ಗಾ ಕಮಿಟಿಯ ಅಧ್ಯಕ್ಷ ಬಿ.ಜಿ. ಹನೀಫ್, ಉಪಾಧ್ಯಕ್ಷ ಅಶ್ರಫ್ ಅಹ್ಮದ್ (RIGHTWAY), ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಿಹಾಬುದ್ದೀನ್ ಸಕಾಫಿ, ಖಜಾಂಚಿ ನಾಝಿಂ ರೆಹ್ಮಾನ್, ಕಾರ್ಯದರ್ಶಿ ಇಸಾಕ್ ಮೇಲಂಗಡಿ ಮತ್ತು ಜತೆ ಕಾರ್ಯದರ್ಶಿ ಮುಸ್ತಫಾ ಎಂಬವರಿದ್ದು, ಉಳ್ಳಾಲ ದರ್ಗಾದ ಆಡಳಿತವನ್ನು ತಮ್ಮ ಮೂಗಿನ ನೇರಕ್ಕೆ ನಡೆಸುತ್ತಿದ್ದಾರೆ.

ಇದಕ್ಕೆ ಸ್ಥಳೀಯ ಪ್ರಭಾವಿ ರಾಜಕೀಯ ನಾಯಕರ ಕೃಪಾರ್ಶಿವಾದ ಇದೆ ಎಂಬ ಸಂಶಯವಿದೆ. ನಾವು 30ಕ್ಕೂ ಹೆಚ್ಚು ದರ್ಗಾ ಸಮಿತಿ ಸದಸ್ಯರು ಒಟ್ಟಾಗಿದ್ದು, ಆಡಳಿತ ಕಮಿಟಿ ವಿರುದ್ಧ ಅವಿಶ್ವಾಸ ಹೊಂದಿದ್ದೇವೆ. ಉಳ್ಳಾಲ ದರ್ಗಾದ ಮೇಲಿನ ಭಕ್ತಿಯಿಂದ ಈವರೆಗೆ ವಿಷಯ ಹೊರಗೆ ತಂದಿರಲಿಲ್ಲ. ಇವರು ನಡೆದುಕೊಳ್ಳುತ್ತಿರುವ ರೀತಿಯಿಂದಾಗಿ ನಾವು ರೋಸಿಹೋಗಿದ್ದು, ಈಗ ಮಾಧ್ಯಮದ ಮುಂದೆ ಬಂದಿದ್ದೇವೆ. ಹಿಂದಿನ ಆಡಳಿತ ಕಮಿಟಿಯವರು ಸರಿ ಇಲ್ಲವೆಂದು ವಕ್ಸ್ ಬೋರ್ಡ್ ಚುನಾವಣೆ ನಡೆಸಿ ಹೊಸ ಆಡಳಿತ ಕಮಿಟಿಯನ್ನು ತರಲಾಗಿತ್ತು.

ಈ ಕೂಡಲೇ ವಕ್ಸ್ ಬೋರ್ಡ್ ಮದ್ಯ ಪ್ರವೇಶಿಸಿ ಅಧ್ಯಕ್ಷರು ಹಾಗು ಪದಾಧಿಕಾರಿಗಳ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಭೆ ಕರೆಯಲು ಈ ಪತ್ರಿಕಾ ಮಾಧ್ಯಮದ ಮೂಲಕ ಕೋರುತ್ತೇವೆ.