ಮಂಗಳೂರು-ಕೇರಳ ನಡುವಿನ ರೈಲು ಹಳಿ ತಪ್ಪಿಸುವ ಯತ್ನ ನಡೆದಿದೆ. ಮಂಗಳೂರಿನ ಉಳ್ಳಾಲ ತಾಲೂಕಿನ ತೊಕ್ಕೊಟ್ಟುವಿಲ್ಲಿ ಭಾರೀ ಆತಂಕ ಹುಟ್ಟಿಸಿದ್ದು, ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಜಲ್ಲಿಕಲ್ಲುಗಳನ್ನಿಟ್ಟು ಆಗಂತುಕರಿಬ್ಬರು ಪರಾರಿಯಾಗಿದ್ದಾರೆ.
ಎರಡು ರೈಲುಗಳು ಚಲಿಸುವ ಸಂದರ್ಭ ದೊಡ್ಡ ಸದ್ದು ಕೇಳಿ ಸ್ಥಳೀಯರಿಗೆ ಆತಂಕ ಸೃಷ್ಟಿಯಾಗಿದ್ದು, ತಡರಾತ್ರಿ ಸುಮಾರಿಗೆ ತೊಕ್ಕೊಟ್ಟುವಿನ ರೈಲ್ವೇ ಹಳಿಯಲ್ಲಿ ಈ ಘಟನೆ ನಡೆದಿದೆ. ಇಬ್ಬರು ಅಗಂತುಕರನ್ನು ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿವಾಸಿ ಮಹಿಳೆಯರು ಕಂಡಿದ್ದಾರೆ. ರೈಲೊಂದು ಕೇರಳ ಕಡೆಗೆ ತೆರಳಿದ ವೇಳೆ ದೊಡ್ಡ ಸದ್ದು ಆವರಿಸಿತ್ತು. ಬಳಿಕ ಇನ್ನೊಂದು ರೈಲು ಚಲಿಸುವಾಗ ಮತ್ತೊಮ್ಮೆ ದೊಡ್ಡ ಸದ್ದು ಕೇಳಿತ್ತು. ಪರಿಣಾಮ ಸ್ಥಳೀಯ ಕೆಲವು ಮನೆಗಳಲ್ಲಿಯೂ ಭಾರೀ ಕಂಪನ ಉಂಟಾಗಿದೆ.
ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ಸ್ಥಳೀಯರು ದೌಡಾಯಿಸಿದ್ದಾರೆ. ಈ ವೇಳೆ ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಪತ್ತೆಯಾಗಿದೆ. ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರ ಮಾಹಿತಿ ನೀಡಿದ್ದಾರೆ.
ಇತ್ತೀಚೆಗಷ್ಟೇ ಉಗ್ರ ಸಂಘಟನೆ ಎಚ್ಚರಿಕೆ ಬೆನ್ನಲ್ಲೇ ಮತ್ತಷ್ಟು ಆತಂಕ ಹೆಚ್ಚಾಗಿದೆ. ಪಾಕ್ ಭಯೋತ್ಪಾದಕ ಫರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದಾರೆ. ಉಗ್ರರ ಸ್ಲಿಪರ್ ಸೆಲ್‌ಗಳಿಗೆ ಕರೆ ನೀಡಿದ ಬೆನ್ನಲ್ಲೇ ದೇಶದ ಹಲವಡೆ ರೈಲು ಹಳಿ ತಪ್ಪಿಸುವ ಪ್ರಯತ್ನಗಳು ನಡೆದಿದ್ದವು. ದೇಶದ ಹಲವೆಡೆ ಎಎನ್‌ಐ ಮತ್ತು ಭಯೋತ್ಪಾದಕ ನಿಗ್ರಹ ದಳದ ಮೂಲಕ ತನಿಖೆ ನಡೆಯುತ್ತಿದೆ.
ಹಲವು ತಿಂಗಳ ಹಿಂದೆ ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿತ್ತು. ರೈಲ್ವೇ ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್ ತುಂಡುಗಳನ್ನಿರಿಸಿ ವಿಧ್ವಂಸಕ ಕೃತ್ಯಕ್ಕೆ ಯತ್ನಿಸಲಾಗಿತ್ತು. ಕಾಸರಗೋಡಿನ ತೃಕ್ಕನ್ನಾಡು, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ಯತ್ನಿಸಲಾಗಿತ್ತು. ಇದೀಗ ಮೊದಲ ಬಾರಿಗೆ ಮಂಗಳೂರಿನಲ್ಲೂ ರೈಲು ಹಳಿಯಲ್ಲಿ ಕಲ್ಲುಗಳನ್ನಿಟ್ಟು ದುಷ್ಜೃತ್ಯ ನಡೆದಿದೆ.

