ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳ ಕೈಗೆ ಸಿಕ್ಕ ಪ್ಲಾಸ್ಟಿಕ್ ಚೆಂಡಿನಂಥ ವಸ್ತು ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಬಾಲಕನೊಬ್ಬ ಗಾಯಗೊಂಡಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂಲರ್ಹ ಮೂಲಗಳ ಮಾಹಿತಿ ಪ್ರಕಾರ, ಕಾಡು ಪ್ರಾಣಿಗಳ ಬೇಟೆಗೆಂದು ಕಿಡಿಗೇಡಿಗಳು ಇಟ್ಟಿದ್ದ ಸ್ಫೋಟಕವಿದು. ಬೆಳ್ತಂಗಡಿ ನಿವಾಸಿ ಜಯಶ್ರೀ (38) ಎಂಬವರ ಇಬ್ಬರು ಮಕ್ಕಳು ಬುಧವಾರ (ಫೆ. 18) ಸಂಜೆ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರು.

ಈ ವೇಳೆ ಅಂಗಳದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್‌ನಿಂದ ಸುತ್ತಲ್ಪಟ್ಟ ಚೆಂಡಿನಾಕಾರದ ವಸ್ತುವನ್ನು ಮಕ್ಕಳು ಕುತೂಹಲದಿಂದ ಎತ್ತಿಕೊಂಡಿದ್ದಾರೆ. ಆಟವಾಡುತ್ತಿದ್ದ ವೇಳೆ ಆ ವಸ್ತು ಇದ್ದಕ್ಕಿದ್ದಂತೆ ಜೋರಾಗಿ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೊಗೆ ಆವರಿಸಿಕೊಂಡಿದ್ದು, ಅದರೊಳಗಿದ್ದ ಕಲ್ಲಿನ ಚೂರುಗಳು ಸಿಡಿದು ಜಯಶ್ರೀ ಅವರ ಓರ್ವ ಮಗನ ಕಾಲಿಗೆ ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ.

ಸ್ಥಳೀಯರು ಮತ್ತು ಪೊಲೀಸರು ನಡೆಸಿದ ಪ್ರಾಥಮಿಕ ಪರಿಶೀಲನೆಯಲ್ಲಿ ಇದು ಕಾಡು ಪ್ರಾಣಿಗಳ ಬೇಟೆಯಾಡಲು ಕಿಡಿಗೇಡಿಗಳು ಬಳಸುವ ಸ್ಫೋಟಕ ಎಂದು ತಿಳಿದುಬಂದಿದೆ. ಎಲ್ಲೋ ಕಾಡಿನಂಚಿನಲ್ಲಿ ಇರಿಸಲಾಗಿದ್ದ ಈ ಸ್ಫೋಟಕವನ್ನು ಬೀದಿ ನಾಯಿಗಳು ಕಚ್ಚಿಕೊಂಡು ಬಂದು ಮನೆಯ ಅಂಗಳಕ್ಕೆ ಹಾಕಿರಬಹುದು ಎಂದು ಶಂಕಿಸಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳ ವಿರುದ್ಧ ಸ್ಫೋಟಕ ಕಾಯ್ದೆ 1884 (Explosive Act) ಕಲಂ 9(B)(1)(b) ಮತ್ತು ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 125(A) ರ ಅಡಿಯಲ್ಲಿ ಅ.ಕ್ರ: 09/2026 ರಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.