ಮಂಗಳೂರು: “ಪುರುಷರು ಹುಟ್ಟಿನಿಂದಲೇ ಹಲವಾರು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಆದರೆ, ಸಮಾಜದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲೇ ಪುರುಷರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ” ಎಂದು ಮುಖ್ಯ ಅತಿಥಿ ಮತ್ತು ಹಿರಿಯ ವೈದ್ಯಾಧಿಕಾರಿ ಡಾ. ಮಧುಸೂದನ್ ಇ, ಅಭಿಪ್ರಾಯಪಟ್ಟರು.

ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಲಿಂಗ ಸಂವೇದನಾ ಕೋಶ (Gender Sensitization Cell) ಹಾಗೂ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂಗೀತ ಚಿಕಿತ್ಸೆ ಕೇಂದ್ರ ಸಂಯುಕ್ತಾಶ್ರಯದಲ್ಲಿ ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನಾಂಕ 18.11.2026 ರಂದು ಆಯೋಜಿಸಲಾಗಿದ್ದ ‘ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಪುರುಷರು ಮಹಿಳೆಯರಂತೆ ತಮ್ಮ ಭಾವನೆಗಳನ್ನು ಅಥವಾ ಕಷ್ಟಗಳನ್ನು ಸುಲಭವಾಗಿ ವ್ಯಕ್ತಪಡಿಸುವುದಿಲ್ಲ. ಆದ್ದರಿಂದ ಸಮಾಜವು ಪುರುಷರ ಆರೋಗ್ಯಕ್ಕೂ ಸಮಾನ ಪ್ರಾಮುಖ್ಯತೆ ನೀಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು” ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಯೆನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ಮೊಹಮ್ಮದ್ ಗುಲ್ಜಾರ್ ಅಹ್ಮದ್, “ರೋಗಿಗಳು ಮತ್ತು ಅವರ ಪಾಲಕರಿಗಾಗಿ ಇಂತಹ ಅರ್ಥಪೂರ್ಣ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ನೀಡಿದ ಆಸ್ಪತ್ರೆಯ ಉನ್ನತ ಅಧಿಕಾರಿಗಳಿಗೆ ಮತ್ತು ಜಿಲ್ಲಾ ವೈದ್ಯಾಧಿಕಾರಿ ಡಾ. ಶಿವಪ್ರಕಾಶ್ ಡಿ.ಎಸ್ ಅವರಿಗೆ ಕೃತಜ್ಞತೆಗಳು” ಎಂದರು.
ಸಂಗೀತ ಚಿಕಿತ್ಸೆ ಮತ್ತು ಕಿರುನಾಟಕದ ಮೂಲಕ ಜಾಗೃತಿ:
ಆಸ್ಪತ್ರೆಯಲ್ಲಿದ್ದ ಪುರುಷ ರೋಗಿಗಳು ಮತ್ತು ಅವರ ಆರೈಕೆದಾರರ ಮಾನಸಿಕ ಒತ್ತಡವನ್ನು ನಿವಾರಿಸುವ ಸಲುವಾಗಿ ಡಾ. ಪವನ ಅವರು ‘ಸಂಗೀತ ಚಿಕಿತ್ಸಾ’ (Music Therapy) ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮತ್ತು ಅವರು “ಗುಣಮುಖರಾಗುವುದು ಎಂದರೆ ಕೇವಲ ಔಷಧಿ ಮಾತ್ರವಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿದೆ.
ವೈದ್ಯರು ಮತ್ತು ಚಿಕಿತ್ಸೆಗಳು ದೇಹವನ್ನು ಆರೈಕೆ ಮಾಡಿದರೆ, ಈ ರೀತಿಯ ಕಾರ್ಯಕ್ರಮಗಳು ಮನಸ್ಸನ್ನು ಶಾಂತಗೊಳಿಸುವ, ಆತಂಕವನ್ನು ದೂರ ಮಾಡುವ ಮತ್ತು ಚೇತರಿಕೆಯ ಸಮಯದಲ್ಲಿ ನೆಮ್ಮದಿ ನೀಡುವ ವಿಶಿಷ್ಟ ಶಕ್ತಿಯನ್ನು ಹೊಂದಿದೆ. ಪ್ರತಿಯೊಬ್ಬರಿಗೂ ಶಾಂತಿ, ಸಕಾರಾತ್ಮಕತೆ ಮತ್ತು ಭಾವನಾತ್ಮಕ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಇಂದಿನ ಈ ಕಾರ್ಯಕ್ರಮವು ಒಂದು ಸಣ್ಣ ಪ್ರಯತ್ನವಾಗಿದೆ” ಎಂದು ಹೇಳಿದರು ಇದರೊಂದಿಗೆ, ಫಾರ್ಮ್-ಡಿ (Pharm D) ವಿದ್ಯಾರ್ಥಿಗಳು ‘ಔಷಧಿಗಳ ವೈಚಾರಿಕ ಬಳಕೆ’ (Rational Use of Medicine) ಕುರಿತು ಕಿರುನಾಟಕವನ್ನು ಪ್ರದರ್ಶಿಸಿದರು.
ವೈದ್ಯರ ಚೀಟಿಯ ಮೇರೆಗೆ ಔಷಧಿಗಳನ್ನು ಪಡೆಯುವುದು, ಸರಿಯಾದ ಪ್ರಮಾಣ (Dosage), ಅವಧಿ ಮುಗಿದ ದಿನಾಂಕ (Expiry date) ಪರಿಶೀಲನೆ ಹಾಗೂ ಔಷಧಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದ ಸಂಘಟನಾ ಅಧ್ಯಕ್ಷೆ ಡಾ. ಪ್ರಜಿತಾ ಬಿಜು ಸ್ವಾಗತಿಸಿದರು. ಶ್ರೀಮತಿ. ಫಾತಿಮಾ ವಂದಿಸಿದರು. ಕಾರ್ಯಕ್ರಮದಲ್ಲಿ ಆಯೋಜಕ ಸಮಿತಿಯ ಸದಸ್ಯರಾದ ಡಾ. ಸಲೀಂ ಜಾವಿದ್, ಶ್ರೀಮತಿ ಮುಬೀನಾ, ಶ್ರೀಮತಿ ಕೃಷ್ಣಪ್ರಿಯಾ ಕೆ. ಆರ್ ಮತ್ತು ಕುಮಾರಿ ಸುರಕ್ಷಾ ಅವರು ಸಹ ಉಪಸ್ಥಿತರಿದ್ದರು.

