ಮಂಗಳೂರು : ಎಂಆರ್ಪಿಎಲ್ ಘಟಕದಲ್ಲಿ ಸೆಪ್ಟೆಂಬರ್ 30 ರಂದು ಸಂಭವಿಸಿದ ದುರಂತದಲ್ಲಿ ಮೃತ ಪಟ್ಟ ಹಳೆಯಂಗಡಿಯ ನಿವಾಸಿ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಗರಿಷ್ಟ 1.20 ಕೋಟಿ ರೂಪಾಯಿ ಪರಿಹಾರವನ್ನು ಮಂಜೂರು ಮಾಡಲಾಗಿದೆ ಹಾಗೂ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗವನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದುರಂತ ನಡೆದಂದು ಹಾಗೂ ಮರುದಿನ ಮೃತರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ತಾನು ಮತ್ತು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಡಾ. ವೈ. ಭರತ್ ಶೆಟ್ಟಿ, ಗ್ರಾಮ ಪಂಚಾಯತ್ ಮುಖಂಡರು ಮತ್ತು ಎಂಆರ್ಪಿಎಲ್ ಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಮೃತರ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದೆವು ಎಂದು ತಿಳಿಸಿದರು.
ಕೇಂದ್ರ ಪೆಟ್ರೋಲಿಯಂ ಸಚಿವರು ಮತ್ತು ಸಚಿವಾಲಯದ ಅಧಿಕಾರಿಗಳ ಜತೆ ಮಾತನಾಡಿ ಸಂತ್ರಸ್ತ ಕುಟುಂಬಕ್ಕೆ ನೆರವು ಒದಗಿಸುವ ಮೂಲಕ ಸರಕಾರ ಅವರ ಜತೆಗೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ.

