ಅಬುಧಾಬಿ: ವಿಶ್ವದ ಅತಿದೊಡ್ಡ ಅನಿವಾಸಿ ಭಾರತೀಯ ಸಂಸ್ಥೆಯಾದ ಇಂಡಿಯಾ ಸೋಶಿಯಲ್ ಆ್ಯಂಡ್ ಕಲ್ಚರಲ್ ಸೆಂಟರ್‌ನ ಅಧ್ಯಕ್ಷ ಮಿತ್ರಂಪಾಡಿ ಜಯರಾಮ್ ರೈ ಅವರು, ಇಂಟರ್‌ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಯೂನಿವರ್ಸಲ್ ಸೋಶಿಯೋ ಕಲ್ಚರಲ್ ಅವಾರ್ಡ್’ಗೆ ಭಾಜನರಾಗಿದ್ದಾರೆ.

ಸಮಾಜ ಸೇವೆ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅವರ ಅನನ್ಯ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇಂದು ದುಬೈನಲ್ಲಿ ನಡೆಯಲಿರುವ 47ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಮತ್ತು ಸಾಂಸ್ಕೃತಿಕ ವಿನಿಮಯ ಸಮ್ಮೇಳನದಲ್ಲಿ ಜಯರಾಮ್ ರೈ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಮಿತ್ರಂಪಾಡಿ ಜಯರಾಮ್ ರೈ: ಸಾಧನೆಯ ಸಾರಸಂಗ್ರಹ

  • ಕೆದಂಬಾಡಿ ಗ್ರಾಮದ ದಿ. ಮಿತ್ರಂಪಾಡಿ ಚೆನ್ನಪ್ಪ ರೈ ಮತ್ತು ಡಿಂಬ್ರಿ ಗುತ್ತು ಸರಸ್ವತಿ ರೈ ದಂಪತಿಗಳ ಪುತ್ರ.
  • ಪ್ರಸ್ತುತ ಬಿನ್ ಫರ್ದನ್ ಸಂಸ್ಥೆಯಲ್ಲಿ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ಕಾರ್ಯನಿರ್ವಹಿಸುತ್ತಿದ್ದಾರೆ.
  • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ದೇವಾಲಯಗಳ ಜೀರ್ಣೋದ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
  • ನೂರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು ನೀಡಿದ್ದಾರೆ.
  • ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದ್ದಾರೆ.
  • ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ‘ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ’ ಕಾರ್ಯಕ್ರಮದ ಮುಖ್ಯ ಪ್ರಾಯೋಜಕರಾಗಿದ್ದಾರೆ.
  • ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.
  • ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಮತ್ತು ಆರ್ಥಿಕ ನೆರವು ನೀಡುತ್ತಿದ್ದಾರೆ.

ಇತರ ಪ್ರಶಸ್ತಿಗಳು ಮತ್ತು ಗೌರವಗಳು:

  • 2022ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
  • 2023ರ ‘ಗಡಿನಾಡ ಸದ್ಭಾವನ ಭೂಷಣ ಪ್ರಶಸ್ತಿ’
  • ಅಂತರರಾಷ್ಟ್ರೀಯ ಐಕಾನ್ ಪ್ರಶಸ್ತಿ
  • ಟೋಸ್ಟ್ ಮಾಸ್ಟರ್ ಅಂತರರಾಷ್ಟ್ರೀಯ ಪ್ರಶಸ್ತಿ (DTM ಮತ್ತು ‘ಟ್ರಿಪಲ್ ಕ್ರನ್’)
  • ‘ವಿಶ್ವಮಾನ್ಯ ಪ್ರಶಸ್ತಿ- 2024’
  • ‘ಬಂಟ್ ರತ್ನ 2024’ ಪ್ರಶಸ್ತಿ
  • ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ
  • ‘ನವ ಕರ್ನಾಟಕ ರತ್ನ’ ಗೌರವ

ಜಯರಾಮ್ ರೈ ಅವರ ಸಾಧನೆಗಳು ಅನಿವಾಸಿ ಭಾರತೀಯರಲ್ಲಿ ಹೆಮ್ಮೆಯ ಸಂಕೇತವಾಗಿದೆ.