ಮಂಗಳೂರು: ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF) ದ ಸಭೆಯು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಅ.26 ರಂದು ನಡೆಯಿತು.

59ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸಲಾಯಿತು. ಸಭೆಯಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF) ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಕ್ಯಾಂಪ್ಕೊದ ಅಧ್ಯಕ್ಷರಾದ ಶ್ರೀ ಸತೀಶ್ಚಂದ್ರ ಎಸ್. ಆರ್. ಅವರು ಮಾಹಿತಿ ನೀಡುತ್ತಾ, ಈ ಸಾಲಿನಲ್ಲಿ ಒಟ್ಟು 34 ಅಡಿಕೆ ಮಾದರಿಗಳು ಪರಿಶೀಲನೆಗಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಸುಂಕ (Customs) ಇಲಾಖೆಯಿಂದ ಬಂದಿದ್ದು, ಇದು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF)ಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ದೊರೆಯುತ್ತಿರುವ ಮನ್ನಣೆಯ ದ್ಯೋತಕವಾಗಿದೆ ಎಂದು ತಿಳಿಸಿದರು.

ಹಾಗೆಯೇ, ಕ್ಯಾಂಪ್ಕೊದ ಸಹಯೋಗದೊಂದಿಗೆ 2027ರಲ್ಲಿ ಆಯೋಜಿಸಲು ಉದ್ದೇಶಿಸಿರುವ ಅಂತರರಾಷ್ಟ್ರೀಯ ಅಡಿಕೆ ಸಮ್ಮೇಳನದ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಈ ಸಮ್ಮೇಳನದ ಆಯೋಜನೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಪ್ರಸ್ತುತ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF)ವು ಅಡಿಕೆ ಸಂಶೋಧನೆಗೆ ಮಾತ್ರ ಸೀಮಿತವಾಗಿದ್ದು, ಕರಿಮೆಣಸು, ಕಾಫಿ, ಕೋಕೋ, ರಬ್ಬರ್ ಸೇರಿದಂತೆ ಇತರ ಕೃಷಿ ಉತ್ಪನ್ನಗಳನ್ನೂ ಸಂಶೋಧನೆಯ ವ್ಯಾಪ್ತಿಗೆ ಸೇರಿಸುವ ಉದ್ದೇಶದಿಂದ ಟ್ರಸ್ಟ್ ಡೀಡ್‌ನಲ್ಲಿ ಅಗತ್ಯ ತಿದ್ದುಪಡಿ ಮಾಡುವ ಕುರಿತು ಸಭೆಯಲ್ಲಿ ನಿರ್ಧರಿಸಲಾಯಿತು.

ಹಾಗೆಯೇ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF)ಕ್ಕೆ ಸರ್ಕಾರಿ ಮಟ್ಟದಲ್ಲಿ ಮನ್ನಣೆ ದೊರೆಯುವ ಉದ್ದೇಶದಿಂದ, ಸಂಶೋಧನೆ ನಡೆಸುತ್ತಿರುವ ವಿಶ್ವವಿದ್ಯಾಲಯಗಳು ಅಥವಾ ಸರ್ಕಾರಿ ಇಲಾಖೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು, ಸಂಶೋಧನೆಗೆ ಅಗತ್ಯವಿರುವ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಹಾಗೂ ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ತೀರ್ಮಾನಿಸಲಾಯಿತು. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಗತ್ಯ ಮಾಹಿತಿಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು.

ಸಭೆಯಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ARDF)ದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಕ್ಯಾಂಪ್ಕೊದ ಅಧ್ಯಕ್ಷರಾದ ಶ್ರೀ ಎಸ್. ಆರ್. ಸತೀಶ್ಚಂದ್ರ, ಟ್ರಸ್ಟಿಗಳಾದ ಕ್ಯಾಂಪ್ಕೊದ ವ್ಯವಸ್ಥಾಪಕ ನಿರ್ದೇಶಕರು ಡಾ.ಬಿ.ವಿ.ಸತ್ಯನಾರಾಯಣ, MAMCOS ಶಿವಮೊಗ್ಗದ ಉಪಾಧ್ಯಕ್ಷರಾದ ಶ್ರೀ ಮಹೇಶ್ ಹೆಚ್. ಎಸ್., TSS ನ ನಿರ್ದೇಶಕರಾದ ಶ್ರೀ ನರಸಿಂಹ ಹೆಗ್ಡೆ ಹಾಗೂ TUMCOS ಚನ್ನಗಿರಿಯ ಅಧ್ಯಕ್ಷರ ಪರವಾಗಿ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮಧು ಅವರು ಉಪಸ್ಥಿತರಿದ್ದರು. ವಿಶೇಷ ಆಹ್ವಾನಿತರಾಗಿ ಡಾ. ವಿಘ್ನೇಶ್ವರ ವರ್ಮುಡಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.

-ಡಾ.ಬಿ.ವಿ.ಸತ್ಯನಾರಾಯಣ,
ವ್ಯವಸ್ಥಾಪಕ ನಿರ್ದೇಶಕರು,ಕ್ಯಾಂಪ್ಕೊ ನಿ.,ಮಂಗಳೂರು