ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಭಗವಂತ ಕೋಡಿ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅಶ್ರಫ್ ಜಿ (38) ಎಂಬಾತನು ತನ್ನ ಮನೆಯಲ್ಲಿ ಮಾದಕ ವಸ್ತುವಾದ MDMA ಸಂಗ್ರಹಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ-1) ರತ್ನಕುಮಾರ್ ಎಂ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದರು.

ದಾಳಿಯ ವೇಳೆ ಮನೆಯಲ್ಲಿದ್ದ ಅಶ್ರಫ್ ಜಿ ಜೊತೆಗೂಡಿ ಹಫೀಝ್ ಯಾನೆ ಅಪ್ಪಿ, ಅಫ್ವಾನ್ ಹಾಗೂ ಅಶ್ರಫ್ ಎನ್.ಎ ಎಂಬ ನಾಲ್ವರನ್ನು ವಶಕ್ಕೆ ಪಡೆದು ಮನೆಯ ಪರಿಶೀಲನೆ ನಡೆಸಿದಾಗ, ಒಟ್ಟು 17.97 ಗ್ರಾಂ ತೂಕದ ಸುಮಾರು ₹1,79,700 ಅಂದಾಜು ಮೌಲ್ಯದ MDMA ಮಾದಕ ವಸ್ತು, ಒಂದು ಚೂರಿ ಸೇರಿದಂತೆ ಇತರೆ ವಸ್ತುಗಳು ಪತ್ತೆಯಾಗಿದೆ.

ಪೊಲೀಸರು ಮಾದಕ ವಸ್ತು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 61/2026 ಎಂದು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ NDPS Act 1985ರ ಕಲಂ 8(C), 22(C) ಹಾಗೂ ಆರ್ಮ್ಸ್ ಅಕ್ಟ್‌ನ ಕಲಂ 27 ಅಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.