ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸುಳ್ಳುಗಳ ಸರಮಾಲೆ ಹೆಣೆದು ಕಥೆ ಕಟ್ಟಿದ್ದ ಮುಸುಕುಧಾರಿಯನ್ನ ವಿಶೇಷ ತನಿಖಾ ತಂಡ (SIT) ಬಂಧಿಸಿದೆ.

ಸತತ ವಿಚಾರಣೆಯ ಬಳಿಕ ಮಾಸ್ಕ್‌ ಮ್ಯಾನ್‌ನನ್ನ ತನಿಖಾ ತಂಡ ಬಂಧಿಸಿದೆ. ಇಂದು 11ಗಂಟೆಗೆ ಎಸ್.ಐ.ಟಿ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸಿ ಬಳಿಕ ಆತನನ್ನ ಕಸ್ಟಡಿ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ.

ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಏನೂ ಸಿಗದಿದ್ದ ಹಿನ್ನೆಲೆ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮುಸುಕುಧಾರಿ ವಿರುದ್ಧವೇ ರಿವರ್ಸ್‌ ತನಿಖೆ ಶುರು ಮಾಡಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು.

ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನೂ ಮುಂದುವರಿಸಿದ್ದರು. ಇಷ್ಟೆಲ್ಲಾ ತನಿಖೆ ಬಳಿಕ ಮುಸುಕುಧಾರಿ ಹೆಣೆದಿದ್ದು ಸುಳ್ಳಿನ ಬಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಯುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ.