ಮಂಗಳೂರು: ಧರ್ಮಸ್ಥಳದ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿದ್ದೇನೆಂದು ಸಾಕ್ಷಿ ಸಮೇತ ಬಂದಿದ್ದ ದೂರುದಾರನನ್ನು ಇಂದು ಎಸ್‌ಐಟಿ (SIT) ಅಧಿಕಾರಿಗಳು ಬಂಧಿಸಿದ್ದಾರೆ. ಈ ಬೆನ್ನಲ್ಲೇ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಪ್ರತಿಕ್ರಿಯೆ ನೀಡಿದ್ದಾರೆ.

ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಬಂಧನ ಬಗ್ಗೆ ಮಾತನಾಡಿದ ಧರ್ಮಾಧಿಕಾರಿ, ಈಗ ಒಂದೊಂದೇ ಸತ್ಯಗಳು ಹೊರಗೆ ಬರುತ್ತಿವೆ. ಬೆಂಬಲಕ್ಕೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು. ಇನ್ನು ಪ್ರಕರಣದ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಸತ್ಯಗಳನ್ನು ತೊಳೆದು ಇಟ್ಟಂತಾಗಿದೆ. ಕ್ಷೇತ್ರದ ಮೇಲಿನ ಅಭಿಮಾನ ಹೀಗೇ ಇರಲಿ. ಎಲ್ಲರ ಪ್ರೀತಿ ವಿಶ್ವಾಸ ಸದಾ ಹಿಗೆಯೇ ಇರಲಿ ಎಂದು ಹೇಳಿದರು.

ಶ್ರೀಕ್ಷೇತ್ರದ ಮೇಲೆ ಕೇಳಿ ಬರುತ್ತಿರುವ ಆರೋಪಕ್ಕೆ ಯಾವುದೇ ಆಧಾರಗಳಿಲ್ಲ, ಸಾಕ್ಷ್ಯಗಳಿಲ್ಲ. ವ್ಯವಸ್ಥಿತ ಪಿತೂರಿಯ ಭಾಗವಾಗಿ ಇದನ್ನು ಕಪೋಕಲ್ಪಿತವಾಗಿ ಸುದ್ದಿ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಮತ್ತು ವೈಯಕ್ತಿಕವಾಗಿ ನನ್ನ ಕುಟುಂಬಕ್ಕೆ ಮಸಿ ಬಳೆಯುವ ಪ್ರಯತ್ನ ಇದಾಗಿದ್ದು ಬೇರೇನೂ ಅಲ್ಲ ಎಂದು ವೀರೇಂದ್ರ ಹೆಗ್ಗಡೆ ತಿಳಿಸಿದರು.

ಶ್ರೀಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಪಿತೂರಿ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅಲ್ಲದೇ ಈ ಹಿಂದೆ, ಸಿಬಿಐ ತನಿಖೆ ನಡೆಸಲು ಒತ್ತಾಯಿಸಿದ್ದು ನಾನೇ. ಈಗಲೂ, ಎಸ್ಐಟಿ ತನಿಖೆಯನ್ನು ನಾನು ಸ್ವಾಗತಿಸಿದ್ದೆ. ಹಿಂದೂ ಧರ್ಮ, ಆಚರಣೆ ಮತ್ತು ಸಂಪ್ರದಾಯದ ಬಗ್ಗೆ ಪಿತೂರಿಗಳು ನಡೆಯುತ್ತಲೇ ಬರುತ್ತಿದೆ ಎಂದು ಹೆಗ್ಗಡೆ ಹೇಳಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ 13 ಜಾಗದಲ್ಲಿ ಶವ ಹೂತಿದ್ದೇನೆ ಎಂದು ಅನಾಮಿಕ ಹೇಳಿದ್ದ. ಅಷ್ಟಕ್ಕೂ ಮುಗಿಯದೇ 17 ಕಡೆ ಅಗೆಯಲಾಯಿತು, ಅಲ್ಲಿ ಏನೂ ಕಂಡು ಬಂದಿಲ್ಲ. ಇದು ನಮ್ಮ ಧರ್ಮವನ್ನು ದುರ್ಬಲಗೊಳಿಸುವ ಕೆಲಸವಾಗಿದೆ. ಹಿಂದೂಗಳು ಜಾಗರೂಕರಾಗಬೇಕಾದ ಸಮಯವಿದು ಎಂದು ಇದೇ ವೇಳೆ ಹಿಂದೂಗಳಲ್ಲಿ ಮನವಿಯನ್ನು ಕೂಡ ಮಾಡಿದ್ದಾರೆ.