ಮಂಗಳೂರು : ಮಹಾನಗರ ಪಾಲಿಕೆ ದುರಾಡಳಿತದಿಂದ ಕೂಡಿದ್ದು, ಭ್ರಷ್ಟಾಚಾರ ಮಿತಿ ಮೀರಿದ್ದು, ಜನವಿರೋಧಿ ನೀತಿ ಜಾರಿಯಲ್ಲಿದೆ. ಆಡಳಿತ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ಮಂಗಳೂರು ಮಹಾನಗರಪಾಲಿಕೆಯ ದುರಾಡಳಿತ ಕೊನೆಯಾಗಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮಂಡಲದ ನೇತೃತ್ವದಲ್ಲಿ ಬುಧವಾರ ಮಂಗಳೂರು ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು ಮನಪಾ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಒಂದು ವರ್ಷದಿಂದ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರ ಆಡಳಿತಾಕಾರಿಯವರ ಕೈಯಲ್ಲಿದ್ದು ಭ್ರಷ್ಟಾಚಾರ ಮಿತಿ ಮೀರಿದೆ. ಜನರ ಯಾವುದೇ ಸಮಸ್ಯೆಗಳಿಗೆ ಪಾಲಿಕೆಯಿಂದ ಸ್ಪಂದನೆ ವ್ಯಕ್ತವಾಗುತ್ತಿಲ್ಲ ಎಂದು ಜನತೆ ಆರೋಪಿಸಿದರು.
ಸರಕಾರ ತಕ್ಷಣ ಪಾಲಿಕೆ ಚುನಾವಣೆಗೆ ಆದ್ಯತೆ ನೀಡುವ ಮೂಲಕ ಪಾಲಿಕೆಯಲ್ಲಿ ಆಡಳಿತ ಸುಗಮವಾಗಿ ಸಾಗಲು ಒತ್ತು ನೀಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಇ-ಖಾತಾ ಸಮಸ್ಯೆಯಿಂದ ಜನತೆ ತತ್ತರಿಸುತ್ತಿದ್ದಾರೆ. ಅವೈಜ್ಞಾನಿಕ ತೆರಿಗೆ ಪದ್ಧತಿಯಿಂದಾಗಿ ಜನತೆಯ ಮೇಲೆ ಹೊರೆ ಹೆಚ್ಚಾಗಿದೆ. ಪಾಲಿಕೆಯ ಅವ್ಯವಸ್ಥೆಯಿಂದಾಗಿ ಜನ ಬೀದಿಗಿಳಿಯುವ ಸ್ಥಿತಿ ಎದುರಾಗಿದೆ.
ಪಾಲಿಕೆ ಚುನಾವಣೆ ನಡೆಸಿದರೆ ತಮಗೆ ಹಿನ್ನಡೆಯಾಗಬಹುದೆಂದು ಸರಕಾರ ಚುನಾವಣೆಯಿಂದ ಹಿಂದೆ ಸರಿಯುತ್ತಿದೆ ಎಂದರು. ಬಿಜೆಪಿ ಮುಖಂಡ ರಾಜೇಶ್ ಕೊಟ್ಟಾರಿ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಮತ್ತಿತರರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ರವಿಶಂಕರ ಮಿಜಾರು, ತಿಲಕ್ ರಾಜ್ ಕೃಷ್ಣಾಪುರ, ರಮೇಶ್ ಕಂಡೆಟ್ಟು ನಂದನ್ ಮಲ್ಯ, ಸಂದೀಪ್ ಪಚ್ಚನಾಡಿ, ಶಕಿಲಾ ಕಾವಾ, ಪೂರ್ಣಿಮಾ ರಾವ್, ಅರುಣ್ ಜಿ ಶೇಟ್, ಜಗದೀಶ್ ಶೆಟ್ಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

