ಮಂಗಳೂರು: ನಗರದ ಬೊಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಎಂಎಸ್‌ಎನ್‌ಐಎಂ) ತನ್ನ ‘ಸ್ಫೂರ್ತಿದಾಯಕ 100 ಉಪನ್ಯಾಸ’ ಸರಣಿಯ 65 ನೇ ಭಾಷಣವನ್ನು “ಅಬ್ಬಕ್ಕ @500” ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಿತು.

ಈ ಉಪನ್ಯಾಸವು ತುಳುನಾಡಿನ ದಂತಕಥೆ ರಾಣಿ ಅಬ್ಬಕ್ಕ ಅವರ ಯುದ್ಧತಂತ್ರ ಮತ್ತು ನಾಯಕತ್ವದ ಸಾಮರ್ಥ್ಯಗಳನ್ನು ಎತ್ತಿ ತೋರಿಸಿತು, ಎಂಬಿಎ ವಿದ್ಯಾರ್ಥಿಗಳಿಗೆ ನಾಯಕತ್ವ ಮತ್ತು ನಿರ್ವಹಣಾ ತಂತ್ರದ ಬಗ್ಗೆ ಅಮೂಲ್ಯವಾದ ಪಾಠಗಳನ್ನು ನೀಡಿತು. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕರ ಸಂಘ (ಕೆಆರ್‌ಎಂಎಸ್‌ಎಸ್) ಸಹಯೋಗದಲ್ಲಿ ಈ ಸಂವಾದವನ್ನು ಆಯೋಜಿಸಲಾಗಿತ್ತು.

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್ ಮುಖ್ಯ ಅತಿಥಿಯಾಗಿದ್ದರು. ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಬಿ.ಕೆ. ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಂಎಸ್‌ಎನ್‌ಐಎಂ ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಗೀತಾ ಆರ್. ನಾಯಕ್, ರಾಣಿ ಅಬ್ಬಕ್ಕ ಅವರನ್ನು ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪದ ಸಂಕೇತ ಎಂದು ವರ್ಣಿಸಿದರು. “ಅವರ ಧೈರ್ಯ, ನಾಯಕತ್ವ ಮತ್ತು ಕಾಲಾತೀತ ಗುಣಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತಿವೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು,” ಎಂದು ಅವರು ಹೇಳಿದರು.

ಮುಖ್ಯ ಭಾಷಣ ಮಾಡಿದ ಬಿ.ಕೆ. ಕುಮಾರ್, “ಇತಿಹಾಸವು ಸಾಮಾನ್ಯವಾಗಿ ಅರಸರು ಮತ್ತು ರಾಜವಂಶಗಳನ್ನು ವೈಭವೀಕರಿಸುತ್ತದೆ, ಆದರೆ ನಮ್ಮ ನಾಗರಿಕತೆಯ ನಿಜವಾದ ಚೈತನ್ಯವು ಅದರ ಮಹಿಳೆಯರ ಧೈರ್ಯದ ಮೂಲಕವೂ ಹೊಳೆಯುತ್ತದೆ,” ಎಂದು ಹೇಳಿದರು. ಸುಮಾರು 500 ವರ್ಷಗಳ ಹಿಂದೆ ಪಶ್ಚಿಮ ಕರಾವಳಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ಪೋರ್ಚುಗೀಸ್ ಪಡೆಗಳಿಗೆ ಅಬ್ಬಕ್ಕ ನೀಡಿದ ನಿರೋಧವನ್ನು ನೆನಪಿಸಿಕೊಳ್ಳುತ್ತಾ “ಅವರು ಕೇವಲ ಸಿಂಹಾಸನದಲ್ಲಿರುವ ರಾಣಿಯಾಗಿರಲಿಲ್ಲ, ತನ್ನ ಜನರನ್ನು ಒಗ್ಗೂಡಿಸಿ ಅಪ್ರತಿಮ ಶೌರ್ಯದಿಂದ ರಕ್ಷಿಸಿದ ತಂತ್ರಜ್ಞೆ, ನಾಯಕಿ ಮತ್ತು ದೇಶಭಕ್ತರಾಗಿದ್ದರು,” ಅವರು ಹೇಳಿದರು. ಅವರು ಝಾನ್ಸಿಯ ರಾಣಿ ಲಕ್ಷ್ಮೀ ಬಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮರನ್ನು ಉಲ್ಲೇಖಿಸಿ, ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.

ಅಧ್ಯಕ್ಷೀಯ ಭಾಷಣದಲ್ಲಿ ಡಾ. ಮೊಲ್ಲಿ ಎಸ್. ಚೌಧುರಿ ಅವರು ಇಂದಿನ ನಿರ್ವಹಣಾ ವಿದ್ಯಾರ್ಥಿಗಳಿಗೆ ರಾಣಿ ಅಬ್ಬಕ್ಕ ಅವರ ನಾಯಕತ್ವದ ಪ್ರಸ್ತುತತೆಯನ್ನು ವಿವರಿಸಿದರು. “ಕಾರ್ಯತಂತ್ರದ ಚಿಂತನೆ, ನಾವೀನ್ಯತೆ, ನೆಟ್‌ವರ್ಕಿಂಗ್, ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಒತ್ತಡದೊಳಗಿನ ಸ್ಥಿರತೆ ಅಬ್ಬಕ್ಕ ಅವರ ಯುದ್ಧಭೂಮಿಯಲ್ಲಿ ಎಷ್ಟು ಮುಖ್ಯವಾಗಿತ್ತೋ ಕಾರ್ಪೋರೇಟ್ ಮಂಡಳಿಯ ಸಭೆಯಲ್ಲಿಯೂ ಅಷ್ಟೇ ಮುಖ್ಯ,” ಎಂದು ಹೇಳಿದರು.

ವಿದ್ಯಾರ್ಥಿಗಳು ಅಬ್ಬಕ್ಕ ಅವರ ಚೈತನ್ಯವನ್ನು ತಮ್ಮ ವೃತ್ತಿಜೀವನದಲ್ಲಿ ಕೊಂಡೊಯ್ಯುವಂತೆ ಒತ್ತಾಯಿಸುತ್ತಾ ಅವರು “ನಾಯಕತ್ವವು ನಿಮ್ಮ ಸಾಮ್ರಾಜ್ಯ ಅಥವಾ ನಿಮ್ಮ ಕಂಪನಿಯ ಅಳತೆಯನ್ನು ಕುರಿತು ಅಲ್ಲವೇ ಅಲ್ಲ. ಜೀವನದಲ್ಲಿ ನಿಮ್ಮ ದೂರದೃಷ್ಟಿ, ಧೈರ್ಯ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವೇ ಅತೀ ಮುಖ್ಯವಾದುದು. ಧೈರ್ಯಕ್ಕೆ ಲಿಂಗವಿಲ್ಲ; ಕ್ಷಣ ಬಂದಾಗ, ಎದ್ದು ನಿಂತು ನಿಮ್ಮ ನಂಬಿಕೆಗಳಿಗನುಗುಣವಾಗಿ ಹೋರಾಡಿ ಮತ್ತು ಪರಸ್ಪರ ಬೆಂಬಲ ನೀಡಿ,” ಎಂದರು.

ಕಾರ್ಯಕ್ರಮವು ಸಹಾಯಕ ಪ್ರಾಧ್ಯಾಪಕಿ ಮಾನಸ ಅವರ ಸ್ವಾಗತ ಭಾಷಣ ಮತ್ತು ಪರಿಚಯದೊಂದಿಗೆ ಪ್ರಾರಂಭವಾಯಿತು. ಎಂಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಾದ ಕರಿಷ್ಮಾ ಶೆಟ್ಟಿ ವಂದಿಸಿದರು, ದಿವ್ಯಾ ನಿರೂಪಿಸಿದರು.