ಮಂಗಳೂರು: ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ನಿರ್ಮಾಣ ಪೂರ್ಣಗೊಂಡರೂ, ನೀರು ನಿಂತಿದೆ. ಬಜಾಲ್, ಕಣ್ಣೂರು ಸೇತುವೆಗಳಲ್ಲೂ ಇದೇ ಸಮಸ್ಯೆ ಇದೆ. ಮಳೆಗಾಲದಲ್ಲಿ ಮೋರ್ಗನ್ಸ್ ಗೇಟ್‌ನಿಂದ ನೀರು ಬಂದು ತುಂಬುತ್ತದೆ. ಕೊಳವೆ ಅಳವಡಿಕೆ ಅರ್ಧಕ್ಕೆ ನಿಂತಿದೆ. ಇಲಾಖೆಗಳ ಸಮನ್ವಯದ ಕೊರತೆಯಿಂದ ವಿಳಂಬವಾಗಿದೆ.

ಅತೀ ಹೆಚ್ಚು ವಾಹನ ಸಂಚಾರದ ಮಹಾಕಾಳಿಪಡ್ಪು ಅವಳಿ ರೈಲ್ವೆ ಕೆಳಸೇತುವೆ (ಆರ್‌ಯುಬಿ) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದರೂ, ಕೆಳಗೆ ನಿಂತಿರುವ ನೀರು ಖಾಲಿ ಮಾಡುವುದೇ ಪ್ರಯಾಸವಾಗಿದೆ. ಇದು ಮತ್ತೊಂದು ಪಡೀಲ್‌ ಕೆಳಸೇತುವೆಯಂತಾಗಿದೆ.

ಬಜಾಲ್‌ ಪಡೀಲ್‌ ರೈಲ್ವೆ ಕೆಳಸೇತುವೆಯಡಿ ನೀರು ತುಂಬಿದ್ದು, ಅದನ್ನು ಖಾಲಿ ಮಾಡುವುದೇ ಸವಾಲಾಗಿದೆ. ವರ್ಷವಿಡೀ ಪಂಪ್‌ ಮೂಲಕ ಖಾಲಿ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಸಂಚಾರ ಸ್ಥಗಿತಗೊಳ್ಳುತ್ತಿದೆ. ಕಣ್ಣೂರು ರೈಲ್ವೆ ಕೆಳಸೇತುವೆಯಲ್ಲೂ, ಪಂಪ್‌ವೆಲ್‌ ಫ್ಲೈಓವರ್‌ನಡಿಯೂ ಇದೇ ಸಮಸ್ಯೆ. ಇಷ್ಟಾದರೂ ಎಂಜಿನಿಯರ್‌ಗಳು ಪಾಠ ಕಲಿತಿಲ್ಲ.

ಮಳೆಗಾಲದಲ್ಲಿ ಮೋರ್ಗನ್ಸ್‌ ಗೇಟ್‌ ಭಾಗದ ಹಾಗೂ ಪಕ್ಕದ ಮೊಯ್ಲಿ ಕೆರೆಯ ನೀರು ಹಾಗೂ ಒರತೆ ಬಂದು ಹೊಸ ಅಂಡರ್‌ಪಾಸ್‌ನಡಿ ಶೇಖರಣೆಯಾಗುತ್ತಿದೆ. ಜೂ.1ರಂದು ಸೇತುವೆ ಸಿದ್ಧವಾಗುತ್ತದೆಂದು ನೋಡಲು ಬಂದಿದ್ದ ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ಕೆರೆಯಂತಿದ್ದ ನೀರನ್ನು ಕಂಡು, ಅಧಿಕಾರಿಗಳನ್ನು ತರಾಟೆಗೆ ತೆಗೆದು, ಮರಳಿದ್ದರು.

ಸೇತುವೆಯಡಿಯ ನೀರು ಖಾಲಿ ಮಾಡಲು ನಾಲ್ಕು ಅಡಿ ವ್ಯಾಸ ಮತ್ತು 300 ಮೀ. ಉದ್ದದ ಕೊಳವೆಯನ್ನು ನೇತ್ರಾವತಿ ನದಿ ತನಕ ಹಾಕಲಾಗುತ್ತಿದೆ. ಅದರ 150 ಮೀ. ಅಳವಡಿಕೆ ಕಾಮಗಾರಿ ಮುಗಿದಿದ್ದು, ಮಧ್ಯೆ, ಮಣ್ಣು ಕುಸಿತದಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ.

ರೈಲ್ವೆ ಇಲಾಖೆ, ಮಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ, ಮಂಗಳೂರು ಮಹಾನಗರ ಪಾಲಿಕೆ, ನೀರು ಸರಬರಾಜು, ಮೆಸ್ಕಾಂ ಮೊದಲಾದ ಇಲಾಖೆಗಳು ಜಂಟಿಯಾಗಿ ಕಾಮಗಾರಿ ನಡೆಸುತ್ತಿದ್ದರೂ, ಪರಸ್ಪರ ಸಮನ್ವಯದ ಕೊರತೆಯಿಂದ ವಿಳಂಬವಾಗುತ್ತಿದೆ. ಕಳೆದ ವಾರದ ವಿಪರೀತ ಮಳೆಯಿಂದ ನೀರು ತುಂಬಿತ್ತು. ಇದೀಗ ಪಂಪಿಂಗ್‌ ಮೂಲಕ ನೀರು ಖಾಲಿ ಮಾಡಲಾಗುತ್ತಿದೆ.

ಆದರೂ, ಸಾಕಷ್ಟು ನೀರು ಇದೆ. ನದಿ ತನಕ ಕೊಳವೆ ಹಾಕಿದರೂ, ಪ್ರತಿವರ್ಷ ಮಳೆಗಾಲದಲ್ಲಿ ಕೊಳವೆಯಲ್ಲಿ ಮರಳು ತುಂಬಿ, ಕೃತಕ ನೆರೆಯಾಗುವ ಅಪಾಯವಿದೆ. ಈಗ ಮಹಾನಗರ ಪಾಲಿಕೆಯವರು ಕುಡಿಯುವ ನೀರಿನ ಕೊಳವೆ ಸ್ಥಳಾಂತರ ಮಾಡಲು ಮಣ್ಣು ತೆರವು ಮಾಡಲು ತೊಡಗಿದ್ದಾರೆ. ಇನ್ನೊಂದೆಡೆ ಸಂಪರ್ಕ ರಸ್ತೆ ಮಾಡಲು ಕೊಳಚೆ ಮಣ್ಣನ್ನು ತೆರವು ಮಾಡುವ ಕೆಲಸವನ್ನು ಸ್ಮಾರ್ಟ್‌ ಸಿಟಿಯವರು ಮಾಡುತ್ತಿದ್ದಾರೆ.

ರೈಲ್ವೆಯವರು ನೆಲ ಸಮತಟ್ಟು ಮಾಡಿಕೊಡಬೇಕಿತ್ತು. ಅದನ್ನು ಮಾಡಿಲ್ಲ. ಇಷ್ಟರ ತನಕ ಅಲ್ಲಿರೈಲ್ವೆಯವರ ಕ್ರೇನ್‌ ನಿಂತಿತ್ತು. ಒಂದು ಬದಿಯಲ್ಲಿ ನೆಲದೊಳಗೆ ಬಂಡೆ ಕಲ್ಲುಇದೆ. ಹೊಸ ರೈಲ್ವೆ ಸೇತುವೆ ಇರುವುದರಿಂದ ಬಂಡೆ ಸ್ಫೋಟಿಸಲು ಸಾಧ್ಯವಿಲ್ಲ. ಕೆಮಿಕಲ್‌ ಹಾಕಿ ಬಂಡೆ ಕರಗಿಸಲು 15-20 ದಿನ ಬೇಕಾಗಲಿದೆ. ಪೂರ್ಣ ಕಾಮಗಾರಿ ಮುಗಿಸಲು ಇನ್ನೂ ಮೂರು ತಿಂಗಳು ಬೇಕಾಗಲಿದೆ.

4 ವರ್ಷವಾದರೂ ಮುಗಿದಿಲ್ಲ…
ಮಹಾಕಾಳಿಪಡ್ಪುವಿನಲ್ಲಿ ಸ್ಮಾರ್ಟ್‌ ಸಿಟಿ ಲಿ.ನ 30.7 ಕೋಟಿ ರೂ. ಮತ್ತು ಸಂಸದರ ನಿಧಿ 19.87 ಕೋಟಿ ರೂ. ವೆಚ್ಚದ ರೈಲ್ವೆ ಕೆಳ ಸೇತುವೆಗೆ 2021ರ ಮಾ.28ರಂದು ಅಂದಿನ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಶಿಲಾನ್ಯಾಸ ನೆರವೇರಿಸಿದ್ದರು. 2022ಕ್ಕೆ ಪೂರ್ಣಗೊಳ್ಳಬೇಕಿತ್ತು. ನಾಲ್ಕು ವರ್ಷವಾದರೂ ಕಾಮಗಾರಿ ಮುಗಿದಿಲ್ಲ.