ವೇ| ಬ್ರಂ| ಶ್ರೀ ಮಾವಿನಕುಡಿಗೆ ಸುಬ್ರಹ್ಮಣ್ಯ ಭಟ್ಟ ಇವರು ತಮ್ಮ 92 ವಯಸ್ಸಿನ ತುಂಬು ಜೀವನವನ್ನು ನಡೆಸಿ ನಿನ್ನೆ ಇಹಲೋಕ ಯಾತ್ರೆ ಮುಗಿಸಿದ್ದಾರೆ (29.04.2025). ಶ್ರೀಯುತರು ಪತ್ನಿ, ಓರ್ವ ಪುತ್ರ ಹಾಗೂ ಮೂರ್ವರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರು ಮಲೆನಾಡಿನ ಪ್ರಸಿದ್ಧ ತೋಟದೂರು ಮಾವಿನಕುಡಿಗೆ-ಹೆಗ್ಗೋಡು ವೈದೀಕ ಮನೆತನದವರು.

ತಮ್ಮ ತೀರ್ಥರೂಪರಿಂದಲೇ ಆರಂಭಿಕ ಸಂಸ್ಕಾರಗಳೊಂದಿಗೆ ಸ್ತೋತ್ರಪಾಠ, ಸಂಸ್ಕೃತ, ವೇದ, ಪೌರೋಹಿತ್ಯ ಇತ್ಯಾದಿಗಳನ್ನು ಕಲಿತು, ನಂತರ ಕಳಸ, ಶೃಂಗೇರಿ ಹಾಗೂ ಉಡುಪಿಯ ಸಂಸ್ಕೃತ ಪಾಠ ಶಾಲೆಗಳಲ್ಲಿ ವೇದಾಧ್ಯಯನವನ್ನು ಮುಂದುವರಿಸಿದ ಸುಬ್ರಹ್ಮಣ್ಯ ಭಟ್ಟರಿಗೆ ಅವರ ತಂದೆಯವರ ಅಕಾಲಿಕ ನಿಧನದಿಂದ, ಕೂಡು ಕುಟುಂಬದ ಸಾಂಸಾರಿಕ ಜವಾಬ್ದಾರಿ 23ರ ಹರೆಯದಲ್ಲೇ ಅವರ ಹೆಗಲೇರಿದ್ದು ಜೀವನದ ವಾಸ್ತವ.

ತಾರೀಕು 03.03.1957 ರಂದು ನೆಲ್ಲಿಕೋಟದ ಶ್ರೀ ಕೃಷ್ಣದೇವರಯ್ಯ ಇವರ ಜ್ಯೇಷ್ಠಪುತ್ರಿ ಸೌ|ಶಾರದ ಇವರನ್ನು ಧರ್ಮಪತ್ನಿಯಾಗಿ ಸ್ವೀಕರಿಸಿದ ಅವರ ಸಾರ್ಥಕ ದಾಂಪತ್ಯ ಜೀವನ ಏಳು ದಶಕಗಳನ್ನು ಕಂಡಿದೆ.

ವಂಶಪಾರಂಪರ್ಯದಿಂದ ಬಂದ ಪೌರೋಹಿತ್ಯ ಹಾಗೂ ಜ್ಯೋತಿಷ್ಯ ವೃತ್ತಿಯಲ್ಲಿ ವಿಶೇಷ ಪರಿಣಿತಿ ಗಳಿಸಿದ ಅವರು, ಪೂರ್ವಾಪರ ಪ್ರಯೋಗಗಳಲ್ಲೂ ಜನಾನುರಾಗಿಯಾಗಿ, ಜೊತೆಗೆ ಕೃಷಿಯನ್ನು `ಪ್ರವೃತ್ತಿ’ಯನ್ನಾಗಿ ಸ್ವೀಕರಿಸಿ, `ವೃತ್ತಿ – ಪ್ರವೃತ್ತಿ’ ಇವೆರಡರಲ್ಲೂ ಮೇರು ಸಾಧನೆಯನ್ನು ಮಾಡಿ, ತುಂಬು ಕುಟುಂಬದ ಕೌಟುಂಬಿಕ ಜವಾಬ್ದಾರಿಯನ್ನೂ ನಿರ್ವಹಿಸಿದ ಪರಿ ಅನನ್ಯ.

ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನ ಹಾಗೂ ಕೂಟ ಮಹಾಜಗತ್ತು ಇದರೊದಿಂಗಿನ ಒಡನಾಟದಿಂದಾಗಿ ಮಲೆನಾಡು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಯುತರು ಪ್ರಸಿದ್ಧರಾಗಿದ್ದರು. ಮಾವಿನಕುಡಿಗೆಯ ತಮ್ಮ ಮನೆಯನ್ನೇ ಗುರುಕುಲವನ್ನಾಗಿಸಿ ಸನಾತನ ಧರ್ಮದ ಅಭಿವೃದ್ಧಿಗೆ ಕಟಿಬದ್ಧರಾದ ಅಪೂರ್ವ ಖ್ಯಾತಿ ಅವರದು.

ಕೂಟ ಮಹಾಜಗತ್ತಿನ ವಟುಗಳ ವಸಂತ ವೇದ ಶಿಬಿರದಲ್ಲಿ ಪಠ್ಯ ಕ್ರಮದ ಅಂಗವಾಗಿ, `ಮಂತ್ರವಾಹಿನಿ’ ಎಂಬ ವಿಶೇಷ ಪಠ್ಯ ಪುಸ್ತಕವನ್ನು ರಚಿಸುವ ಸಂದರ್ಭದಲ್ಲಿ ಅದರ ಸಂಪಾದಕ ಮಂಡಳಿಯ ಸಂಪನ್ಮೂಲ ಸದಸ್ಯರಾಗಿ ಸುಬ್ರಹ್ಮಣ್ಯ ಭಟ್ಟರು ನಿರ್ವಹಿಸಿದ ಪಾತ್ರ ಹಾಗೂ ನೀಡಿದ ಮಾರ್ಗದರ್ಶನಕ್ಕೆ ಕೂಟ ಮಹಾಜಗತ್ತು ಸದಾ ಚಿರಋಣಿ.

ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾ ಸನ್ನಿಧಾನಂಗಳವರ ಪೂರ್ಣಾನುಗ್ರಹಕ್ಕೆ ಪಾತ್ರರಾದ ಸುಬ್ರಹ್ಮಣ್ಯ ಭಟ್ಟರು ಅನೇಕ ಪ್ರಶಸ್ತಿ ಸಂಮಾನ ಗಳಿಗೂ ಹಾಜನರಾಗಿದ್ದರು.

ಅವುಗಳಲ್ಲಿ ಬಹಳ ಮುಖ್ಯವಾದವು, ಹೊರನಾಡು ಶ್ರೀ ಆದಿಶಕ್ತಾ÷್ಯತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತಗಳಾದ ಶ್ರೀ ಭೀಮೇಶ್ವರ ಜೋಶಿಯವರು ಹಾಗೂ ಅಖಿಲ ಕರ್ಣಾಟಕ ಸಂಸ್ಕöÈತ ಪರಿಷತ್, ಬೆಂಗಳೂರು ಇವರು ಜಂಟಿಯಾಗಿ ಕೊಡ ಮಾಡಿದ `ಸಂಸ್ಕೃತ  ಶ್ರೀ’ ಪ್ರಶಸ್ತಿ, ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತಮ್ಮ ಪಂಚಮ ಪರ್ಯಾಯದ ಸಮಯದಲ್ಲಿ ಅನುಗ್ರಹಿಸಿದ `ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’,

ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹಿಸಿದ `ಪುರೋಹಿತ ರತ್ನ’ ಪ್ರಶಸ್ತಿ, ಕೇರಳದ ಮಂಗಲ್ಪಾಡಿಯಲ್ಲಿ ನಡೆದ ಕೂಟ ಮಹಾಜಗತ್ತಿನ 65ನೇ ಮಹಾಧಿವೇಶನದಲ್ಲಿನ `ವಿಶೇಷ ಅಭಿನಂದನಾ ಪುರಸ್ಕಾರ’, ಮಂಗಳೂರಿನ ಕಲ್ಕೂರ ಪ್ರತಿಷ್ಠಾನದವರು ಕೊಡ ಮಾಡಿದ `ಪೇಜಾವರ ಶ್ರೀವಿಶ್ವೇಶತೀರ್ಥ ಜೀವಮಾನ ಸಾಧನಾ ಪ್ರಶಸ್ತಿ’ ಮುಂತಾದವುಗಳು ಉಲ್ಲೇಖಾರ್ಹ.

ಅಂತೆಯೇ ಬಾಳೆಹೊಳೆ ಶ್ರೀ ಚನ್ನಕೇಶವ ದೇವಸ್ಥಾನ, ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನ, ಬಶ್ರೀಕಟ್ಟೆ ಜನಾರ್ದನ ಸ್ವಾಮಿ ದೇವಸ್ಥಾನ, ಹೊರನಾಡು ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನ ಇತ್ಯಾದಿ ದೈವ-ದೇವಸ್ಥಾನ-ಧಾರ್ಮಿಕ-ಸಾಮಾಜಿಕ- ಶೈಕ್ಷಣಿಕ ಕ್ಷೇತ್ರಗಳಲ್ಲಿ ಜೀವನದುದ್ದಕ್ಕೂ ಸಕ್ರಿಯವಾಗಿ ತೊಡಗಿಸಿಕೊಂಡು ಮಾರ್ಗದರ್ಶನ ನೀಡಿದ ಸಾರ್ಥಕ ಜೀವನ ಅವರದು.

ಅವರ ಸುಪುತ್ರ ಡಾ. ಮಹಾಬಲೇಶ್ವರ ಎಂ ಎಸ್ ಇವರು ನಮ್ಮ ದೇಶದ ಅಗ್ರಮಾನ್ಯ ಖಾಸಗಿ ಬ್ಯಾಂಕ್ ಕರ್ಣಾಟಕ ಬ್ಯಾಂಕಿನ ಎಂಡಿ & ಸಿಇಓ ಆಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿ, ಬ್ಯಾಂಕ್ ಅನ್ನು ಅಭಿವೃದ್ಧಿಯ ಉತ್ತುಂಗಕ್ಕೇರಿಸಿ ಬ್ಯಾಂಕಿನ ಪರಿವರ್ತನಾ ಹರಿಕಾರರಾಗಿ ಜನಾನುರಾಗಿಯಾದವರು.