ಮಂಗಳೂರು : ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರ್ಘಟನೆ ಘಟಿಸಿದ್ದು ಮೇ . 22, 2010. 158 ಪ್ರಯಾಣಿಕರ ಸಾವಿಗೆ ಕಾರಣವಾದ ದುರಂತ ಘಟನೆ 15 ವರ್ಷಗಳಾದರೂ ಇಲ್ಲಿ ತುರ್ತಾಗಿ ಆಗಬೇಕಾಗಿದ್ದ ಹೆಚ್ಚುವರಿ ಸುರಕ್ಷತೆಯ “ಸೇಫ್ಟಿ ಬೇಸಿಕ್ ಸ್ಟ್ರಿಪ್” ಇನ್ನೂ ಆಗಿಲ್ಲ.
ಅಂದರೆ ಪ್ರಯಾಣಿಕರ ಸುರಕ್ಷತೆಗೆ ಅಗತ್ಯವಾಗಿ ಬೇಕಿದ್ದ ಉಪಕ್ರಮದ ಬಗ್ಗೆ ಇನ್ನೂ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲೆಕೆಡಿಸಿಕೊಂಡಿಲ್ಲ. ಕೇಂದ್ರ ಸರಕಾರದ ನಾಗರಿಕ ವಿಮಾನ ಇಲಾಖೆ, ಭೂಮಿ ಕೊಡಿ ಎಂದರೆ, ರಾಜ್ಯ ಸರಕಾರವು “ವಿಮಾನ ನಿಲ್ದಾಣ ನಿರ್ವಹಿಸುವ ಸಂಸ್ಥೆಯೇ ಕೈಗೊಳ್ಳಲಿ’ ಎಂದು ಕೈತೊಳೆದುಕೊಂಡಿತು. ಒಟ್ಟಿನಲ್ಲಿ ಈ ಮೂವರ ಜಗಳದಲ್ಲಿ ಪ್ರಯಾಣಿಕರು ಬಡವಾಗಿದ್ದಾರೆ. ಅವರ ಸುರಕ್ಷತೆ ತ್ರಿಶಂಕು ಸ್ಥಿತಿಯಲ್ಲಿದೆ.
ದುರಂತದ ಬಳಿಕ ನಾಗರಿಕ ವಿಮಾನ ಯಾನ ಮಹಾನಿರ್ದೇಶಕರ ನೇತೃತ್ವದ ತಂಡ ತನಿಖೆ ನಡೆಸಿ, ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಹೆಚ್ಚುವರಿ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು 10 ವರ್ಷದ ಹಿಂದೆ ವರದಿ ನೀಡಿತು. ಅದರಲ್ಲಿ ಪ್ರಮುಖವಾಗಿ ಆಗಬೇ ಕಿದ್ದು ಸೇಫ್ಟಿ ಬೇಸಿಕ್ ಸ್ಟ್ರಿಪ್ ಇನ್ನು ಆಗಿಲ್ಲ.
ಸೇಫ್ಟಿ ಬೇಸಿಕ್ ಸ್ಟ್ರಿಪ್ ಎಂದರೆ ರನ್‌ವೇಯ ಎರಡೂ ಬದಿ ತಲಾ 140 ಮೀ ಅಗಲದ ಜಾಗ ಇರಬೇಕು. ಈಗ ರನ್‌ವೇಯ ಒಂದು ಬದಿ 140 ಮೀ ಲಭ್ಯವಾದರೂ ಇನ್ನೊಂದು ಬದಿಯಲ್ಲಿ ಇಲ್ಲ. ಇದಕ್ಕಾಗಿ ಹೆಚ್ಚುವರಿ 32.97 ಎಕ್ರೆ ಜಮೀನು ಒದಗಿಸುವಂತೆ 2015-16ರಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಿತು. ಕಳೆದ ವರ್ಷವೂ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯವು ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ರಾಜ್ಯ ಸರಕಾರವೇ ಉಚಿತವಾಗಿ ಭೂಮಿ ಒದಗಿಸುವಂತೆ ಪತ್ರದಲ್ಲಿ ಉಲ್ಲೇಖೀಸಲಾಗಿತ್ತು.
ಆದರೆ, ಮಂಗಳೂರು ಏರ್‌ಫೋರ್ಟ್ ಅನ್ನು ಖಾಸಗಿ ಕಂಪೆನಿ ನಿರ್ವಹಿಸುತ್ತಿರುವ ಕಾರಣ ರಾಜ್ಯ ಸರಕಾರ ಭೂಸ್ವಾಧೀನ ವೆಚ್ಚ ಭರಿಸಲಾಗದು ಎಂದಿತು. ವಿಮಾನ ನಿಲ್ದಾಣ ನಿರ್ವಹಿಸುವ ಸಂಸ್ಥೆಯೇ ಭೂ ಸ್ವಾಧೀನ ಮಾಡಬೇಕು. ಅದಕ್ಕೆ ಅಗತ್ಯ ಸಹಕಾರ ಕೊಡಲಾಗುವುದು ಎಂದು ಹೇಳಿತು. ಹಾಗಾಗಿ ಪ್ರಯಾಣಿಕರ ಸುರಕ್ಷತೆಯ ಅಗತ್ಯ ಕಗ್ಗಂಟಾಗಿದೆ.
ರನ್‌ವೇ ವಿಸ್ತರಣೆಗೆ ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ಜಮೀನು ಗುರುತಿಸಿ ಜಿಲ್ಲಾಡಳಿತವು ರಾಜ್ಯ ಸರಕಾರದ ಮೂಲ ಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ವರ್ಷಗಳಾಗಿವೆ. ಆದರೆ ಇದುವರೆಗೆ ಭೂಸ್ವಾಧೀನ ಅಂತಿಮ ಹಂತ ತಲುಪಿಲ್ಲ. ಮಂಗಳೂರು ಅಂ. ವಿಮಾನ ನಿಲ್ದಾಣ ಕರ್ನಾಟಕದ ಎರಡನೇ ಅತ್ಯಂತ ಹೆಚ್ಚು ಪ್ರಯಾಣಿಕರ ದಟ್ಟಣೆಯ ವಿಮಾನ ನಿಲ್ದಾಣವಾಗಿದೆ. ನಿತ್ಯವೂ ಸುಮಾರು 36 ವಿಮಾನಗಳ ಸಂಚಾರವನ್ನು ನಿರ್ವಹಿಸುತ್ತಿದೆ.
ಮಂಗಳೂರು ಏರ್‌ಪೋರ್ಟ್ ರನ್‌ವೇಯ ರಿಕಾಪiಟಿಂಗ್ ಕೆಲಸ ನಡೆದಿದೆ. ಗಟ್ಟಿಯಾದ ರನ್‌ವೇಯಲ್ಲಿ ಡಾಮರಿನ ಮೇಲ್ಪದರವನ್ನು ಅಳವಡಿಸುವ ಕಾಮಗಾರಿ ದೇಶದಲ್ಲಿ ಮೊದಲ ಬಾರಿ ಎಂಬಂತೆ ನಡೆದಿತ್ತು. ಈ ಮೂಲಕ ರನ್‌ವೇ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ವಿಮಾನ ಬಿದ್ದ ಕಣಿವೆ ಭಾಗದಲ್ಲಿ ಅಂದು ರಕ್ಷಣಾ ಕಾರ್ಯಾಚರಣೆ ನಡೆಸಲು ಸುತ್ತಳತೆ ಪ್ರದೇಶದಲ್ಲಿ ಸೂಕ್ತ ರಸ್ತೆ ವ್ಯವಸ್ಥೆ ಇರಲಿಲ್ಲ. ಆದರೆ ಈಗ ಸುತ್ತಮುತ್ತ ರಸ್ತೆ ಮಾಡಲಾಗಿದೆ.
ವಿಮಾನ ನಿಲ್ದಾಣದ ಭವಿಷ್ಯದ ಕಾರ್ಯಾಚರಣೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರನ್‌ವೇ ಸೆಂಟರ್ ಲೈಟಿಂಗ್ ಅಳವಡಿಸಲಾಗಿದೆ. ಪೈಲೆಟ್‌ಗಳಿಗೆ ಆಕಾಶದಿಂದಲೇ ರನ್‌ವೇ ಗೋಚರಿಸಲು 2450 ಮೀ. ಉದ್ದದ ರನ್‌ವೇಗೆ ಲೈಟ್ ಅಳವಡಿಸಲಾಗುತ್ತಿದೆ.
ರನ್‌ವೇಯ ಎರಡೂ ತುದಿಗಳಲ್ಲೂ ಸುರಕ್ಷತೆ ದೃಷ್ಟಿಯಿಂದ ತಲಾ 140 ಮೀಟರ್ ಉದ್ದ 90 ಮೀ. ಅಗಲದಲ್ಲಿ “ರನ್‌ವೇ ಎಂಡ್ ಸೇಫ್ಟಿ ಏರಿಯಾ’ (ರೇಸಾ) ನಿರ್ಮಿಸಬೇಕು. ಆಕಸ್ಮಿಕವಾಗಿ ಓವರ್‌ಶೂಟ್ ಆಗುವ ವಿಮಾನವು ಈ ಕಾರಣದಿಂದ ಹೆಚ್ಚು ಸುರಕ್ಷಿತವಾಗಿರುತ್ತದೆ. ಇದರಲ್ಲಿ ಒಂದು ಬದಿಯನ್ನು ಪೂರ್ಣವಾಗಿದೆ, ಇನ್ನೊಂದು ಅಂತಿಮ ಹಂತದಲ್ಲಿದೆ.
ವಿಮಾನ ದುರಂತ ಸಂಭವಿಸಿದ ಕಾಲಕ್ಕೆ ಇಲ್ಲಿನ “ಟೇಬಲ್ ಟಾಪ್ ರನ್‌ವೇ ಬಗ್ಗೆಯೇ ದೇಶವ್ಯಾಪಿ ಚರ್ಚೆಯಾಗಿತ್ತು. ರನ್‌ವೇ ವಿಸ್ತರಣೆ ಅಗತ್ಯ ಎಂಬ ಮಾತೂ ಕೇಳಿಬಂದಿತ್ತು. ಅದರೆ, ರಾಜ್ಯ ಹಾಗೂ ಕೇಂದ್ರ ಸರಕಾರ ಒಟ್ಟಾಗಿ ಆಸಕ್ತಿ ತೋರದ ಕಾರಣ ರನ್‌ವೇ ವಿಸ್ತರಣೆಣೆ ಆಗಿಲ್ಲ. ಮಂಗಳೂರು ಏರ್ ಪೋರ್ಟ್‌ನಲ್ಲಿ ಪ್ರಸ್ತುತ ರನ್‌ವೇ 8,038 ಅಡಿ ಉದ್ದವಿದೆ. 2013ರಲ್ಲಿ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು.
ಈ ಯೋಜನೆಗೆ 280 ಎಕ್ರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಎಂದು ಅಂದಾಜಿಸಲಾಗಿತ್ತು. ಭೂ ಸ್ವಾಧೀನಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ, ಅಧಿಕ ಮೊತ್ತ ಅಗತ್ಯವಿದ್ದ ಕಾರಣ ವಿಸ್ತರಣೆಯನ್ನು 10,500 ಅಡಿಗೆ ಇಳಿಸಲಾಯಿತು. ಅದೂ ಹೊರೆ ಎಂದುಕೊಂಡು ಸದ್ಯ 32.97 ಎಕ್ರೆ ಭೂ ಸ್ವಾಧೀನಕ್ಕೆ ಮಿತಗೊಳಿಸಲಾಗಿದೆ. ಈ ಮಧ್ಯೆ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿದ ಕಾರಣದಿಂದ ಭೂಸ್ವಾಧೀನ ಕಾರ್ಯ ನಮ್ಮದಲ್ಲ ಎಂದಿದೆ ರಾಜ್ಯ ಸರಕಾರ.
ಏರ್ ಇಂಡಿಯಾ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಮೇ 22ರಂದು 15 ವರ್ಷ, ದೇಶದ ನಾಗರಿಕ ವಿಮಾನಯಾನ ರಂಗದಲ್ಲಿಯೇ ಇದು ಎಂದೆಂದೂ ಮರೆಯಲಾಗದ ದುರ್ಘಟನೆ. 2010ರ ಮೇ 22ರ ಮುಂಜಾನೆ ಸಂಭವಿಸಿದ ಮಹಾದುರಂತದಲ್ಲಿ ಪೈಲಟ್, ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ ಒಟ್ಟು 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು,
ಈ ಪೈಕಿ 8 ಮಂದಿ ಬದುಕುಳಿದಿದ್ದರು. ದುಬಾಯಿಯಿಂದ ಮಂಗಳೂರಿಗೆ ಬಂದ ವಿಮಾನ ಎಲ್ಲ ಸುರಕ್ಷಾ ಸಂಕೇತಗಳನ್ನು ಆಧರಿಸಿಯೇ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲಬೇಕಾದ ವಿಮಾನವು ನೇರವಾಗಿ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಬಿತ್ತು.
ಮುಖ್ಯ ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ 8 ಮಂದಿ ಬದುಕುಳಿದಿದ್ದರು. ದುಬಾಯಿಯಿಂದ ಮಂಗಳೂರಿಗೆ ಬಂದ ವಿಮಾನ ಎಲ್ಲ ಸುರಕ್ಷಾ ಸಂಕೇತಗಳನ್ನು ಆಧರಿಸಿಯೇ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲಬೇಕಾದ ವಿಮಾನವು ನೇರವಾಗಿ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಬಿತ್ತು. ಮುಖ್ಯ ಪೈಲಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಈ ದುರ್ಘಟನೆಗೆ ಕಾರಣ ಎಂದು ನಂತರ ನಡೆದ ತನಿಖೆಯಲ್ಲಿ ಪತ್ತೆಯಾಯಿತು.

