ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಕ್ಷೇತ್ರವು ಪವಿತ್ರ ಸ್ಥಳವಾಗಿ ಪ್ರಸಿದ್ಧಿಯಾಗಿದ್ದು, ಶ್ರೀ ದುರ್ಗಾ ಪರಮೇಶ್ವರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುವ ‘ತೂಟೆದಾರ’ ಅಗ್ನಿ ಕೇಳಿ ಸಾವಿರಾರು ಭಕ್ತರನ್ನು ಸೆಳೆಯಿತು.
ಜಾತ್ರೆಯ ಕೊನೆಯ ದಿನ ಹರಕೆ ಸೇವೆಯ ರೂಪದಲ್ಲಿ ನಡೆಯುವ ಈ ತೂಟೆದಾರದಲ್ಲಿ, ತಾಳೆ ಗರಿಯನ್ನು ಸುತ್ತಿ ಬೆಂಕಿ ಹಚ್ಚಿದ ಪಂಜುಗಳನ್ನು ಭಕ್ತರು ಪರಸ್ಪರ ಎಸೆಯುವ ವಿಶಿಷ್ಟ ಆಚರಣೆ ನಡೆಯುತ್ತದೆ. ದೇವಿ ದುರ್ಗಾಪರಮೇಶ್ವರಿಗೆ ಈ ಸೇವೆ ಪ್ರಿಯವೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಸಂಪ್ರದಾಯ ಪೀಳಿಗೆಯಿಂದ ಪೀಳಿಗೆ ಮುಂದುವರಿದಿದೆ.
ತುಳುನಾಡಿನ ಪರಂಪರೆಯ ಪ್ರತೀಕವಾಗಿರುವ ಈ ಅಗ್ನಿ ಕೇಳಿ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಭಕ್ತರ ನಡುವೆ ಮಾತ್ರ ನಡೆಯುವುದು ವಿಶೇಷ. ಈ ಎರಡು ಗ್ರಾಮಗಳ ಹೊರತಾಗಿ ಇತರರಿಗೆ ಭಾಗವಹಿಸುವ ಅವಕಾಶ ಇರುವುದಿಲ್ಲ. ತೂಟೆದಾರದಲ್ಲಿ ಭಾಗವಹಿಸುವ ಭಕ್ತರು ಧ್ವಜಾರೋಹಣದ ದಿನದಿಂದಲೇ ಮದ್ಯ ಹಾಗೂ ಮಾಂಸ ತ್ಯಜಿಸಿ ವ್ರತ ಆಚರಿಸುತ್ತಾರೆ. ಅಗ್ನಿ ಕೇಳಿಯ ದಿನ ಧೋತಿ ಧರಿಸಿ, ಅಜಾರು ಸಮೀಪದ ಜಳಕದ ಕಟ್ಟೆಯಲ್ಲಿ ಸ್ನಾನ ಮಾಡಿ ಬಳಿಕ ಅಜಾರು ರಕ್ತೇಶ್ವರಿ ಸನ್ನಿಧಿಯಲ್ಲಿ ಎರಡು ತಂಡಗಳಾಗಿ ವಿಭಜನೆಗೊಂಡು ಪಂಜುಗಳನ್ನು ಎಸೆಯುವ ಆಚರಣೆ ಆರಂಭಗೊಳ್ಳುತ್ತದೆ.
ಮೂರು ಸುತ್ತುಗಳಲ್ಲಿ ನಡೆಯುವ ಈ ಅಗ್ನಿ ಕೇಳಿಯಲ್ಲಿ, ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಸ್ನೇಹಿತರಾದರೂ ಆ ಕ್ಷಣದಲ್ಲಿ ವೈರಿಗಳಂತೆ ಕಾದಾಡುತ್ತಾರೆ. ನಂತರ ದೇವಸ್ಥಾನದ ರಥಬೀದಿಯಲ್ಲಿ ಮತ್ತೆ ಉರಿಯುವ ತೂಟೆಗಳನ್ನು ಎಸೆದು ರಣರೋಚಕ ದೃಶ್ಯ ಸೃಷ್ಟಿಸುತ್ತಾರೆ. ಕಾದಾಟ ಅತಿರೇಕಕ್ಕೆ ಹೋಗದಂತೆ ಗ್ರಾಮ ಹಿರಿಯರು ನಿಯಂತ್ರಣ ವಹಿಸುತ್ತಾರೆ.
ಈ ಆಚರಣೆಯ ಹಿಂದೆ ಧಾರ್ಮಿಕ ನಂಬಿಕೆಯೂ ಇದೆ. ಅರುಣಾಸುರನನ್ನು ಸಂಹರಿಸಿದ ಬಳಿಕ ದೇವಿಯನ್ನು ಅಗ್ನಿಯಿಂದ ಸ್ವಾಗತಿಸಿದ ಸಂಕೇತವಾಗಿ ತೂಟೆದಾರ ನಡೆಯುತ್ತದೆ ಎಂಬ ಪ್ರತೀತಿ ಇದೆ.
ಅಗ್ನಿ ಕೇಳಿಯಲ್ಲಿ ಭಾಗವಹಿಸುವವರಿಗೆ ದೇವಸ್ಥಾನದಿಂದ ಕುಂಕುಮ ಮತ್ತು ಹೂಗಳನ್ನು ನೀಡಲಾಗುತ್ತದೆ. ಭಾಗವಹಿಸುವವರು ದೇಹಕ್ಕೆ ಕುಂಕುಮ ಲೇಪಿಸಿಕೊಂಡು, ತಲೆಗೆ ಹೂ ಧರಿಸುವುದು ವಿಶೇಷ. ಅಪಾಯಕಾರಿ ದೃಶ್ಯಗಳ ನಡುವೆಯೂ ಈವರೆಗೆ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನುವುದು ಭಕ್ತರ ನಂಬಿಕೆ.
ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಈ ತೂಟೆದಾರ ಅಗ್ನಿ ಕೇಳಿಯನ್ನು ಕಣ್ತುಂಬಿಕೊಳ್ಳಲು ದೂರದೂರದಿಂದ ಸಾವಿರಾರು ಜನರು ಆಗಮಿಸಿದ್ದು, ಈ ಬಾರಿಯೂ ಭಕ್ತಿಭಾವ ಮತ್ತು ರೋಮಾಂಚನದಿಂದ ಕೂಡಿದ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾದರು.

