ಮಂಗಳೂರು: ನಮಗೆ ಜೀವನದಲ್ಲಿ ಹಲವಾರು ಅವಕಾಶಗಳು ಸಿಗುತ್ತವೆ. ಅವುಗಳನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಯುವತಿಯರು ತಮ್ಮ ವಿದ್ಯಾಭ್ಯಾಸವನ್ನು ಸಂಪೂರ್ಣಗೊಳಿಸಿದ ಬಳಿಕ ಉದ್ಯಮದ ಕಡೆಗೆ ಮುಖ ಮಾಡಬೇಕಾದ ಅಗತ್ಯವಿದೆ. ಮಹಿಳೆಯರಲ್ಲಿ ಅಂತರ್ಗತವಾದ ಕೌಶಲ್ಯವಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಪ್ರತಿಯೊಬ್ಬರು ಗಮನಹರಿಸಬೇಕು.

ಉದ್ಯಮಶೀಲತೆ ಎಂದರೆ ಸೋಲುಗಳನ್ನು ಸ್ವೀಕರಿಸಿ ಅದರಲ್ಲಿ ಮುಂದುವರಿಯುವುದು. ಸಾಮಾಜಿಕ ಜಾಲತಾಣದ ಮೂಲಕ ಹಲವಾರು ಮಾಹಿತಿಗಳು ಇಂದು ನಮಗೆ ಸಿಗುತ್ತದೆ. ಹಲವಾರು ಅವಕಾಶಗಳು ನಮ್ಮ ಮುಂದಿವೆ. ಅವುಗಳನ್ನು ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದೆ.

ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ನಾವು ಉನ್ನತ ಸ್ಥಾನಕ್ಕೇರಬೇಕಾದರೆ ಗುರಿಯನ್ನು ತಲುಪುವ ಬಲವಾದ ಆತ್ಮಸ್ಥೈರ್ಯ ನಮ್ಮಲ್ಲಿರಬೇಕು. ದೊಡ್ಡ ಕನಸುಗಳು ನಮ್ಮದಾಗಲಿ ಮತ್ತು ಅವುಗಳನ್ನು ಸಾಧಿಸಲು ಅವಿರತವಾಗಿ ಪ್ರಯತ್ನಿಸೋಣ” ಎಂದು ಮಂಗಳೂರಿನ ಜೆ. ವಿ. ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕರಾದ ಆತ್ಮಿಕಾ ಅಮಿನ್ ಹೇಳಿದರು.

ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್‌ನ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ನಡೆದ “ಶಕ್ತಿ” ಮಹಿಳಾ ಸಬಲೀಕರಣ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಗಳೂರಿನ ಮಂಗಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಾ. ಅನಿತಾ ಜಿ. ಭಟ್ ಅವರು ಮಾತನಾಡಿ “ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇಕಡ. 50 ರಷ್ಟು ಮಹಿಳೆಯರಿದ್ದಾರೆ.

ಎಲ್ಲಿಯವರೆಗೆ ಮಹಿಳಾ ಸಬಲೀಕರಣವಾಗುವುದಿಲ್ಲವೋ, ಅಲ್ಲಿಯವರೆಗೆ ದೇಶದ ಸಬಲೀಕರಣ ಸಾಧ್ಯವಿಲ್ಲ. ಸಮಾಜದ ಪ್ರತಿಯೊಂದು ಆಯಾಮದಲ್ಲಿ ಮಹಿಳೆಯರು ಇಂದು ಮುಂಚೂಣಿಯಲ್ಲಿದ್ದಾರೆ. ಇಂದಿನ ಯುವ ಜನಾಂಗವು ದೇಶದ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಮಹಿಳಾ ಸಬಲೀಕರಣವಾದಾಗ ಮಾತ್ರ ರಾಷ್ಟ್ರದ ಬೆಳವಣಿಗೆ ಸಾಧ್ಯ. ಇಂದಿನ ಯುವ ಜನಾಂಗ ಕೌಶಲ್ಯಯುತರಾಗುದರೊಂದಿಗೆ ಉನ್ನತ ಮೌಲ್ಯಗಳನ್ನು ತಮ್ಮದಾಗಿಸಬೇಕು” ಎಂದು ಅಭಿಪ್ರಾಯಪಟ್ಟರು.

ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿಗಳಾದ ಸ್ವಾಮಿ ಜಿತಕಾಮಾನಂದಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿಶೇಷ ಅವಧಿಗಳು ಹಾಗೂ ಸಂವಾದ
ಕಾರ್ಯಕ್ರಮದ ಮೊದಲನೇ ಅವಧಿಯಲ್ಲಿ ಉತ್ತರಾಖಂಡದ ಮಾಯಾವತಿಯ ಅದ್ವೈತ ಆಶ್ರಮದ ಪ್ರಬುದ್ಧ ಭಾರತ ಮಾಸಪತ್ರಿಕೆಯ ಸಹ ಸಂಪಾದಕರಾದ ಸ್ವಾಮಿ ಜ್ಞಾನೀಶಾನಂದಜಿ ಅವರು “Education that Empowers – The Vivekananda Vision for Women” ಎಂಬ ವಿಷಯದ ಬಗ್ಗೆ ಮಾತನಾಡಿದರು.

ಎರಡನೇ ಅವಧಿಯಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಕ್ಷಮ ಸಂಚಾಲಕರಾದ ಡಾ. ಗ್ರೀಷ್ಮಾ ವಿವೇಕ್ ಆಳ್ವ ಅವರು “Leading with Shakthi: Redefining Women’s Leadership in the 21st Century” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ನಂತರ “The Power to Care: Redefining Strength and Service in Today’s Women” ಎಂಬ ವಿಷಯದ ಕುರಿತು ನಡೆದ ಸಂವಾದ ನಡೆಯಿತು. ಈ ಸಂವಾದದಲ್ಲಿ ಮಂಗಳೂರಿನ Rai’s Spices ನ ಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವ್ಯಾ ರೈ, ಮಂಗಳೂರಿನ ಅನಿರ್ವೇದ ಫೌಂಡೇಶನ್‌ನ ಅನುಪಮಾ ವಿ. ಪ್ರಭು,

ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಮಂಗಳೂರಿನ ಫಾದರ್ ಮ್ಯುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಪ್ರಶಸ್ತಿ ಪುರಸ್ಕೃತ ಶುಶ್ರೂಷಕಿ ಪ್ರಿಸಿಲ್ಲಾ ರೋಡ್ರಿಗೆಸ್ ಅವರು ಭಾಗವಹಿಸಿದರು. ಪುತ್ತೂರಿನ ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ. ಅವರು ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

600 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗಿ
ಈ ಕಾರ್ಯಕ್ರಮದಲ್ಲಿ ಮಂಗಳೂರಿನ ನೀರುಮಾರ್ಗದ ಮಂಗಳಾ ಸಮೂಹ ಸಂಸ್ಥೆಗಳು ಹಾಗೂ ಕುಡುಪುವಿನ ತೇಜಸ್ವಿನಿ ಕಾಲೇಜ್ ಆಫ್ ನರ್ಸಿಂಗ್‌ನ 600 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮಂಗಳೂರು ರಾಮಕೃಷ್ಣ ಮಿಷನ್‌ನ ಸ್ವಯಂಸೇವಕರಾದ ರಂಜನ್ ಬೆಳ್ಳರ್ಪ್ಪಾಡಿ ಅವರು ಈ ಸ್ವಾಗತಿಸಿ, ಮಂಗಳ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ನ ಪ್ರಾಂಶುಪಾಲರಾದ ಪ್ರೊ. ಪ್ರತಿಜ್ಞಾ ಸುಹಾಸಿನಿ ವಂದಿಸಿದರು, ಪುತ್ತೂರಿನ ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಶರಣ್ಯ ಯು. ಆರ್. ಕಾರ್ಯಕ್ರಮ ನಿರ್ವಹಿಸಿದರು.