ಮಂಗಳೂರು: ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಬ್ರಹ್ಮಕಲಶ, ನೇಮೋತ್ಸವ ಮಾಡುವ ಬದಲು ದಾನಿಗಳು ದೇವಸ್ಥಾನಗಳಿಗಿಂತ ಹೆಚ್ಚಾಗಿ ಶಾಲಾ-ಕಾಲೇಜುಗಳಿಗೆ, ವೃತ್ತಿಪರ ಶಿಕ್ಷಣ ಕೇಂದ್ರಗಳಿಗೆ ದಾನ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕರೆ ನೀಡಿದ್ದಾರೆ.
ಮಂಗಳೂರಿನ ಕುದ್ರೋಳಿಯಲ್ಲಿ ಅಖಿಲ ಭಾರತ ಬಿಲ್ಲವ ಒಕ್ಕೂಟ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.
“ಬೆವರು ಸುರಿಸಿ ದುಡಿಯುವ ಜನಸಾಮಾನ್ಯರ ತೆರಿಗೆ ಹಣದಿಂದಲೇ ಬೆಂಗಳೂರು ಮತ್ತು ದೆಹಲಿಯ ಖಜಾನೆ ತುಂಬುತ್ತಿದೆ. ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಗೂ ಸಮಾನವಾಗಿ ಹಂಚಿಕೆಯಾಗಬೇಕು. ಹಿಂದುಳಿದ ವರ್ಗಗಳು, ದಲಿತರು ಮತ್ತು ಶೋಷಿತ ಸಮುದಾಯಗಳ ಸಬಲೀಕರಣ ಮಾಡುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯವೇ ಹೊರತು ಯಾರದ್ದೋ ಪಿತ್ರಾರ್ಜಿತ ಆಸ್ತಿಯಲ್ಲ” ಎಂದು ಹರಿಪ್ರಸಾದ್ ಹೇಳಿದರು.
ನಾರಾಯಣ ಗುರು ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿವೇತನ ಒದಗಿಸಲು ಸರ್ಕಾರ ಬದ್ಧವಾಗಿರಬೇಕು. ಅದಕ್ಕಾಗಿ ಅಗತ್ಯ ಹಣಕಾಸು ಮತ್ತು ಯೋಜನೆಗಳನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಸದಾ ನಂಬರ್ ಒನ್. ಅದರಲ್ಲೂ ಹೆಣ್ಣುಮಕ್ಕಳೇ ಮುಂಚೂಣಿಯಲ್ಲಿರುತ್ತಾರೆ. ಆದರೆ ನಂತರ ಹುಡುಕಿದರೆ ನಮ್ಮ ಸಮುದಾಯಗಳಿಂದ ಒಬ್ಬ ಐಎಎಸ್ ಇಲ್ಲ, ಕೆಎಎಸ್ ಇಲ್ಲ. ಕೇವಲ ಪುಸ್ತಕದ ಬದನೆಕಾಯಿಯಾದರೆ ಸಾಲದು, ಆಡಳಿತಾತ್ಮಕ ಹುದ್ದೆಗಳನ್ನು ಹಿಡಿದು ಸಮಾಜವನ್ನು ಮುನ್ನಡೆಸಬೇಕು ಎಂದು ಅವರು ಕರೆ ನೀಡಿದರು.
ಕೊರಗ ಸಮುದಾಯದ ಇಂದಿನ ದುಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ಕೊರಗ ಸಮುದಾಯದ ಜನರು ಇಂದಿಗೂ ಒಂದು ಗುಂಟೆ, ಒಂದು ಸೆಂಟ್ ಸ್ವಂತ ಜಾಗವಿಲ್ಲದಿರುವುದು ನಾಗರಿಕ ಸಮಾಜಕ್ಕೆ ನಾಚಿಕೆಯಾಗಬೇಕು. ಸಂವಿಧಾನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಕಟ್ಟಕಡೆಯ ಕೊರಗ ವ್ಯಕ್ತಿಗೂ ಇದೆ. ಸಮಬಾಳು, ಸಮಪಾಲು ತತ್ವದಡಿ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಪ್ರತಿಪಾದಿಸಿದರು.

