ಮಂಗಳೂರು: 43 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕಳೆದ ಒಂದು ವರ್ಷದಿಂದ ಅತಿಯಾದ ಋತುಸ್ರಾವ, ಋತುಸ್ರಾವದ ದಿನಗಳಲ್ಲಿ ಹೊಟ್ಟೆಯ ಭಾಗದಲ್ಲಿ ತೀವ್ರ ನೋವಿನ ಲಕ್ಷಣಗಳನ್ನು ಹೊಂದಿದ್ದರು. ತಪಾಸಣೆಯ ವೇಳೆ ಆಕೆಗೆ ಎಂಡೊಮೆಟ್ರಿಯೋಸಿಸ್ ಇರುವುದು ಪತ್ತೆಯಾಗಿತ್ತು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಆಸ್ಪತ್ರೆಗಳನ್ನು ಸಂದರ್ಶಿಸಿದ್ದರೂ ಗುಣ ಕಂಡಿರಲಿಲ್ಲ.
ಒಂದು ವಾರದಿಂದ ಆಕೆ ಹೊಟ್ಟೆಯ ಭಾಗದಲ್ಲಿ ತೀವ್ರ ನೋವು, ಜ್ವರದಿಂದ ಬಳಲಿ ಕೆಎಂಸಿ ಆಸ್ಪತ್ರೆ ಅತ್ತಾವರದ ಸ್ರ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗಕ್ಕೆ ಬಂದಿದ್ದರು. ಆಕೆಯನ್ನು ಅಲ್ಟಾಸೌಂಡ್ ಮತ್ತು ಎಂಆರ್ಐಗೆ ಒಳಪಡಿಸಿದಾಗ ಎರಡೂ ಅಂಡಾಶಯಗಳಲ್ಲಿ ಬೈಲ್ಯಾಟರಲ್ ಎಂಡೊಮೆಟ್ರಿಯೋಟಿಕ್ ಗಂಟುಗಳು ಇರುವುದು ಹಾಗೂ ಅಕ್ಯೂಟ್ ಪೆಲ್ವಿಕ್ ಇನ್ಫ್ಲಮೇಟರಿ ಕಾಯಿಲೆಯ ಲಕ್ಷಣಗಳು ಪತ್ತೆಯಾಗಿದ್ದವು.
ಆಕೆಗೆ ಇಂಟ್ರಾವೇನಸ್ ಆ್ಯಂಟಿಬಯಾಟಿಕ್ ಔಷಧ ನೀಡಿ ಒಂದು ವಾರ ನಿಗಾ ಇರಿಸಲಾಯಿತು. ಆದರೆ ಜ್ವರ ಮತ್ತು ನೋವು ಕಡಿಮೆಯಾಗದಿದ್ದುದನ್ನು ಗಮನಿಸಿ ಶಸ್ತ್ರಚಿಕಿತ್ಸೆಯ ನಿರ್ಧಾರ ಕೈಗೊಳ್ಳಲಾಯಿತು. ಹಿರಿಯ ಗೈನಕಾಲಜಿಸ್ಟ್ಗಳಾದ ಡಾ| ನೀನಾ ಮಹಾಲೆ ಮತ್ತು ಹಿರಿಯ ಜನರಲ್ ಸರ್ಜನ್ ಡಾ| ಪೂರ್ಣಚಂದ್ರ ತೇಜಸ್ವಿ ಅವರುಶಸ್ತ್ರ ಚಿಕಿತ್ಸೆಯನ್ನು ನಡೆಸಿದಾಗ ಹೊಟ್ಟೆಯ ಭಾಗದಲ್ಲಿ ಕೀವು ತುಂಬಿರುವುದು, ಪೆಲ್ವಿಕ್ ಭಾಗದಲ್ಲಿ ಬಾವು ಹಾಗೂ ಗರ್ಭಕೋಶ, ಎರಡೂ ಫಾಲೊಪಿಯನ್ ನಾಳಗಳು ಮತ್ತು ಅಂಡಾಶಯಗಳು ಹೊಟ್ಟೆಗೆ ಅಂಟಿಕೊಂಡಿರುವುದು ತಿಳಿದುಬಂತು. ನಂಜು ಮತ್ತು ಎಂಡೊಮೆಟ್ರಿಯೋಸಿಸ್ನಿಂದಾಗಿ ಇದು ಬಹಳ ಸಂಕೀರ್ಣ ಪ್ರಕರಣವಾಗಿದ್ದು, ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಅಗತ್ಯವಾಗಿತ್ತು.
ಪೆಲ್ವಿಸ್ ಭಾಗದ ಅಂಗಾಂಗಗಳು ರೋಗಪೀಡಿತವಾಗಿ ಪರಸ್ಪರ ಅಂಟಿಕೊಂಡಿದ್ದರೂ ಅವುಗಳನ್ನು ಯಶಸ್ವಿಯಾಗಿ ಬೇರ್ಪಡಿಸುವಲ್ಲಿ ಶಸ್ತ್ರ ಚಿಕಿತ್ಸಾ ತಜ್ಞರ ತಂಡ ಯಶಸ್ವಿಯಾಯಿತು ಹಾಗೂ ಬೈಲ್ಯಾಟರಲ್ ಸಾಲ್ಪಿಂಗೊಓಫೊರೆಕ್ಟೊಮಿಯ ಜತೆಗೆ ಟೋಟಲ್ ಅಬ್ಡೊಮಿನಲ್ ಹಿಸ್ಟರೆಕ್ಟೊಮಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಪೋಸ್ಟ್ ಆಪರೇಟಿವ್ ವಾರ್ಡ್ನಲ್ಲಿ ಆಕೆಯ ಔಷಧೋಪಚಾರವನ್ನು ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರ ವಿಭಾಗದ ಘಟಕ ಮುಖ್ಯಸ್ಥೆ ಡಾ| ಅಪರ್ಣಾ ಭಟ್, ಡಾ| ನೀನಾ ಮಹಾಲೆ ಮತ್ತು ಡಾ| ಸೌದಾ ಅವರ ನೇತೃತ್ವದಲ್ಲಿ ನಿಕಟ ನಿಗಾದಡಿ ಕೈಗೊಳ್ಳಲಾಯಿತು.
ಡಾ| ದೀಪಕ್ ಮಡಿ ಅವರ ನಾಯಕತ್ವದ ವೈದ್ಯಕೀಯ ಆರೈಕೆ ತಂಡವು ನಂಜನ್ನು ನಿಯಂತ್ರಿಸಿ ಸೂಕ್ತ ಸೂಕ್ಷ್ಮಜೀವಿ ನಾಶಕ ಚಿಕಿತ್ಸೆಯನ್ನು ಒದಗಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸಿತು. ಡಾ| ಸುಮೇಶ್ ರಾವ್ ಅವರ ನೇತೃತ್ವದ ಅರಿವಳಿಕೆ ವೈದ್ಯರ ತಂಡವು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅರಿವಳಿಕೆ ಮತ್ತು ಆ ಬಳಿಕ ನೋವು ನಿವಾರಣೆಯಲ್ಲಿ ಸಹಕರಿಸಿತು.
ಗೈನಕಾಲಜಿ, ಸರ್ಜರಿ, ಮೆಡಿಸಿನ್, ರೇಡಿಯಾಲಜಿ ಮತ್ತು ಅನಸ್ತೇಶಿಯಾದಂತಹ ಹಲವು ವೈದ್ಯಕೀಯ ವಿಭಾಗಗಳು ಜತೆಗೂಡಿ ಕ್ಲಿಷ್ಟಕರ ರೋಗಿ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸುವ ಕೌಶಲಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಈ ತಂಡ ಪ್ರಯತ್ನವು ಯಶಸ್ವಿಯಾಗುವಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಚಕ್ರಪಾಣಿ ಮತ್ತು ಅವರ ತಂಡ ಬೆನ್ನೆಲುಬಾಗಿ ನಿಂತಿತು.
ರೋಗಿ ಈಗ ಉತ್ತಮವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರೋಗಿಯು ಯಾವುದೇ ತೊಂದರೆಗಳಿಲ್ಲದೆ ಗುಣಮುಖವಾಗುತ್ತಿರುವುದು ಆ ಬಳಿಕದ ಫಾಲೊಅಪ್ ಭೇಟಿಗಳ ವೇಳೆ ತಿಳಿದುಬಂದಿದೆ. ತಂಡ ಪ್ರಯತ್ನ, ವೈದ್ಯಕೀಯ ನೈಪುಣ್ಯ ಮತ್ತು ಶಸ್ತ್ರಚಿಕಿತ್ಸಾತ್ಮಕ ಕೌಶಲಗಳು ಇಂತಹ ಕ್ಲಿಷ್ಟಕರ ಪ್ರಕರಣಗಳನ್ನು ನಿಭಾಯಿಸುವಲ್ಲಿ ಬಹಳ ನಿರ್ಣಾಯಕ ಎಂಬುದನ್ನು ಅತ್ತಾವರ ಕೆಎಂಸಿಯಲ್ಲಿ ನಡೆಸಲಾಗಿರುವ ಈ ಚಿಕಿತ್ಸೆಯು ಸಾಬೀತುಪಡಿಸಿದ್ದು, ಆಸ್ಪತ್ರೆಯು ಇಂತಹ ನುರಿತ, ಕೌಶಲಭರಿತ ವೈದ್ಯರ ತಂಡವನ್ನು ಹೊಂದಿರುವುದಕ್ಕೆ ಸಾಕ್ಷಿಯಾಗಿದೆ.

