ಮಂಗಳೂರು : ಸಚಿವ ಪ್ರಿಯಾಂಕ ಖರ್ಗೆ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ್ ಆಪ್ತನಾಗಿರುವ ಲಿಂಗರಾಜುನನ್ನು ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಖರ್ಗೆ ಹುಕುಂ ಇಲ್ಲದೆ ಗುಲ್ಬರ್ಗದಲ್ಲಿ ಏನೊಂದೂ ಅಲ್ಲಾಡದ ಸ್ಥಿತಿಯಿದೆ. ಆದರೆ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷನೂ ಆಗಿರುವ ಲಿಂಗರಾಜು ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದು ಗೊತ್ತಿರಲಿಲ್ಲವೇ. ಮಹಾರಾಷ್ಟ್ರ ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ ಅಂದ್ರೆ ಕರ್ನಾಟಕ ಪೊಲೀಸರ ಕೈಕಟ್ಟಿ ಹಾಕಲಾಗಿತ್ತೇ. ರಾಜ್ಯವನ್ನು ಉಡ್ತಾ ಪಂಜಾಬ್ ಆಗಲು ಬಿಡಲ್ಲ ಎಂದು ಹೇಳುವ ಗೃಹ ಸಚಿವರಿಗೆ ಗೊತ್ತಾಗಿಲ್ಲವೇ. ಪ್ರಿಯಾಂಕ ಖರ್ಗೆ, ಅಲ್ಲಮಪ್ರಭು ಪಾಟೀಲ್ ಕೃಪೆಯಿಂದಲೇ ಡ್ರಗ್ಸ್ ದಂಧೆ ನಡೀತಿತ್ತಾ ಎಂದು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಯಾವುದೇ ಒಂದು ಪ್ರಕರಣ ಆದಕೂಡಲೇ ಇನ್ನೊಂದು ಪ್ರಕರಣ ಮುಂದಿಟ್ಟು ಮುಚ್ಚಿ ಹಾಕೋದನ್ನು ಕಾಂಗ್ರೆಸ್ ಸರ್ಕಾರ ಮಾಡ್ತಾ ಬಂದಿದೆ , ಸಚಿವ ಪ್ರಿಯಾಂಕ ಖರ್ಗೆ ಈ ಬಗ್ಗೆ ಬಹಿರಂಗವಾಗಿ ತಮ್ಮ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಖರ್ಗೆಯವರ ಇಲಾಖೆಯಲ್ಲಿ ಭ್ರಷ್ಟಾಚಾರ ಎಷ್ಟಾಗುತ್ತಿದೆ ಎಂಬುದನ್ನು ನಾವು ಹೇಳಕ್ಕೆ ಹೋಗಲ್ಲ. ಅದು ಮಾಧ್ಯಮದಲ್ಲೇ ಬರ್ತಾ ಇರೋದು ನೋಡ್ತಿದೇವೆ.

ಆದರೆ ಸಚಿವ ಸ್ಥಾನದಲ್ಲಿದ್ದವರು ಕೂಡ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದರೆ ರಾಜ್ಯದ ಜನತೆಗೆ ಬಗೆದ ದ್ರೋಹವಾಗುತ್ತದೆ. ಖರ್ಗೆಯ ರಿಪಬ್ಲಿಕ್ ಆಫ್ ಗುಲ್ಬರ್ಗದಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರಿದ್ದನ್ನು ತುಟಿ ಬಿಚ್ಚದೆ ಸಹಿಸಿಕೊಳ್ಳುವುದು ಅಪರಾಧ. ಮಂತ್ರಿಯಾಗಿ ತನ್ನ ಆಪ್ತರು ಅರೆಸ್ಟ್ ಆಗುವಾಗ ಯಾಕೆ ಮಾತನಾಡುತ್ತಿಲ್ಲ. ಡ್ರಗ್ಸ್ ಕಿಂಗ್ ಪಿನ್ ಇವರೇನಾ ಎಂಬ ಸಂಶಯ ಜನರಲ್ಲಿ ಬರ್ತಿದ್ದು ಇದಕ್ಕೆ ಅವರೇ ಸ್ಪಷ್ಟನೆ ನೀಡಬೇಕಾಗಿದೆ.

ಬಂಧಿತ ಲಿಂಗರಾಜು ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ. ಇಲ್ಲಿ ರಾಜಕೀಯ ಒತ್ತಡ ಇಲ್ಲದೆ, ಖರ್ಗೆಯ ಕುಮ್ಮಕ್ಕಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಎರಡು ತಿಂಗಳ ಹಿಂದೆ ಪೊಲೀಸರು ಅಲ್ಲಿ ಡ್ರಗ್ಸ್‌ ಹಿಡಿದಿದ್ದಾರೆ, ಆದರೆ ಈ ಲಿಂಗರಾಜುವನ್ನು ಬಂಧಿಸದೆ ತಡೆದಿದ್ದು ಯಾರು ಎನ್ನುವುದು ತಿಳಿಯಬೇಕಾಗಿದೆ. ಗೃಹ ಸಚಿವರು ಉಡ್ತಾ ಪಂಜಾಬ್ ಆಗಲು ಬಿಡಲ್ಲ ಎಂದು ಹೇಳ್ತಾರಂದ್ರೆ, ಅಷ್ಟರಮಟ್ಟಿಗೆ ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಇದೆಯಾ ಅನ್ನೋದನ್ನು ಅವರೇ ಹೇಳಬೇಕು. ಅಷ್ಟೊಂದು ದೊಡ್ಡ ಮಟ್ಟದಲ್ಲಿ ಆಗ್ತಿದೆ ಅಂತ ಗುಪ್ತಚರ ಮಾಹಿತಿ ಇದ್ದೇ ಈ ರೀತಿ ಹೇಳಿರಬೇಕಲ್ವಾ. ಎಂದು ಭರತ್ ಶೆಟ್ಟಿ ಪ್ರಶ್ನಿಸಿದರು.