ಮಂಗಳೂರು : ಈ ಹಿಂದಿನ ನಿಗದಿಯಂತೆ ಕಾಮಗಾರಿಗೆ ವೇಗ ನೀಡಿ ಮಳೆಗಾಲ ಆರಂಭವಾಗುತ್ತಿದ್ದಂತೆ ವಾಹನ ಸಂಚಾರಕ್ಕೂ ಮುಕ್ತ ಗೊಳಿಸುವ ಯೋಜನಾ ಸಿದ್ಧಪಡಿಸಲಾಗಿತ್ತು, ಆದರೆ ಕಾಮಗಾರಿ ವೇಳೆ ನೆಲದಡಿಯಲ್ಲಿ ಬಂದೆ ಕಾಣಿಸಿಕೊಂಡಿರುವ ಕಾರಣ ಕಾಮಗಾರಿಗೆ ಹಿನ್ನಡೆ ಉಂಟಾಗಿದೆ.

ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು, ಮಂಗಳೂರು ಸ್ಮಾರ್ಟ್‌ ಸಿಟಿ ವತಿಯಿಂದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿ ಕಡೆಯ ಒಂದು ಪಥ ರಸ್ತೆಯ ಕಾಮಬರಿಯನ್ನು ಪೂರ್ಣಗೊಳಿಸಲಾಗಿದೆ.

ಇಲ್ಲಿನ ರೈಲ್ವೇ ಅಂಡ‌ರ್ ಪಾಸ್‌ ಕಾಮಗಾರಿಯಿಂದಾಗಿ ಕೆಲವು ವರ್ಷಗಳಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲೇ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ಸಾಗುವ ಕಿರಿದಾದ ಮಾರ್ಗವಿದ್ದು, ಅದರ ಮಧ್ಯ ಭಾಗದಲ್ಲಿ ಉಂಟಾಗಿರುವ ಹೊಂಡದಿಂದಾಗಿ ಅಪಾಯ ಎದುರಾಗಿದೆ.

ಕೆಲವು ವರ್ಷಗಳಿಂದ ಈ ರಸ್ತೆಯ ತಿರುವು ಪ್ರದೇಶವೊಂದರಲ್ಲಿರುವ ಹೊಂಡ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಕಿರಿದಾದ ಹಾಗೂ ಇಕ್ಕಟ್ಟಿನ ಓಣಿ ರಸ್ತೆಯಾಗಿರುವುದರಿಂದ ಬೆಳಗ್ಗೆ ಸಂಜೆ ಹೊತ್ತು ಅತೀ ಹೆಚ್ಚು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳು ಸಾಗುವುದರಿಂದ ದಟ್ಟಣೆ ಉಂಟಾಗುತ್ತಿದೆ. ಲೆವೆಲ್ ಕ್ರಾಸಿಂಗ್‌ನಲ್ಲಿ ಗೇಟ್ ಹಾಕುವುದರಿಂದ ದಟ್ಟಣೆಯೂ ಇರುತ್ತದೆ.

ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಸ್ಮಾರ್ಟ್ ಸಿಟಿಯಿಂದ 30.7 ಕೋಟಿ ರೂ. ಮೊತ್ತವನ್ನು ರೈಲ್ವೇ ಇಲಾಖೆಗೆ ಪಾವತಿ ಮಾಡಲಾಗಿದೆ. ರೈಲ್ವೇ ಇಲಾಖೆಯೇ ಟೆಂಡ‌ರ್ ಕರೆದು ಕಾಮಗಾರಿ ನಡೆಸುತ್ತಿದೆ. ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಹಾಗೂ ಉಳಿದ ಹಣದಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣವಾಗಲಿದೆ. ಸೇತುವೆಯ ಎರಡೂ ಭಾಗಗಳಲ್ಲಿ ಸ್ಮಾರ್ಟ್‌ಸಿಟಿಯಿಂದ ಈಗಾಗಲೇ ಕಾಂಕ್ರೀಟ್ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದೆ.