ಬಂಟ್ವಾಳ:  ಇದು  ನೋಡಲು ರಸ್ತೆಯಂತಿದ್ದರೂ, ಇಲ್ಲಿ ಚಂದ್ರಗ್ರಹದಲ್ಲಿ ತೆಗೆದ ಛಾಯಾಚಿತ್ರದಂತಿದೆ.. ಹೌದು ಇದು  ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಬ್ರಹ್ಮರಕೋಟ್ಲು ಟೋಲ್ ಪ್ಲಾಜಾದ ಬಳಿಯ  ಸರ್ವೀಸ್ ರಸ್ತೆಯ  ಒಂದು ನೋಟ. ಇಲ್ಲಿನ  ರಸ್ತೆಯ ಸಮಸ್ಯೆ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದಿದ್ದು, ರಸ್ತೆ ರಿಪೇರಿ ಮಾಡಿ ಕೊಡಿ ಎಂಬ ಒತ್ತಾಯಗಳು ಕೇಳಿ ಬಂದಿವೆ.

ರಾ.ಹೆ.75 ರ ಬಿ.ಸಿ.ರೋಡು ಸಮೀಪದ ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಬಳಿಯ ಸರ್ವೀಸ್ ರಸ್ತೆಯು ಅವ್ಯವಸ್ಥೆಯಿಂದ ಕೂಡಿದ್ದು, ಅದನ್ನು ಹೇಳೋರು ಇಲ್ಲ, ಕೇಳೋರೂ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಿ.ಸಿ.ರೋಡಿನಿಂದ ಸರ್ವೀಸ್ ರಸ್ತೆಯಲ್ಲಿ ಸಾಗಿದ ವಾಹನಗಳು ಬ್ರಹ್ಮರಕೋಟ್ಲು ಎಂಬಲ್ಲಿ  ಹೆದ್ದಾರಿ ಸೇರುವ ಭಾಗದಲ್ಲಿ ಬೃಹತ್ ಹೊಂಡಗಳಿಂದ ಲಘು ವಾಹನಗಳು  ಜಖಂಗೊಳ್ಳುವ ಸ್ಥಿತಿ ಇದ್ದರೂ, ಅದರ ದುರಸ್ತಿಗೆ ಯಾರೂ ಕ್ರಮವಹಿಸಿಲ್ಲ ಎಂಬ ಆರೋಪ ಇದೀಗ ಸದ್ದು ಮಾಡಿದೆ.

ಹೆದ್ದಾರಿಗೆ ಸಂಪರ್ಕಿಸುವ ಏರು ರಸ್ತೆಯಲ್ಲಿ ಒಂದು ಅಡಿಗೂ ಆಳದ ಬೃಹತ್ ಗುಂಡಿಗಳಿದ್ದು, ಸಣ್ಣ ಕಾರುಗಳ ತಳ ಭಾಗಕ್ಕೆ ತಾಗಿ ನಿತ್ಯವೂ ವಾಹನಗಳಿಗೆ ಹಾನಿಯಾಗುತ್ತಿದೆ. ಇದರಿಂದ ವಾಹನಗಳು ಜಖಂಗೊಂಡ ಉದಾಹರಣೆಗಳು ಕೂಡ ಸಾಕಷ್ಟಿದೆ. ಈ ಭಾಗದಲ್ಲಿ ವಾಹನ ಸಂಚರಿಸುವ ಸಂದರ್ಭ ಗುಡ್ಡ ಹತ್ತುವ ಅನುಭವವಾಗಿದ್ದು, ಕಾರುಗಳ ಚಕ್ರಗಳು ಸಂಪೂರ್ಣ ಹೊಂಡದಲ್ಲಿ ಮುಳುಗಿ ಹೋಗುತ್ತದೆ.

ಸ್ಥಳೀಯ ವಾಹನಗಳು ನಿತ್ಯವೂ ಮರ‍್ನಾಲ್ಕು ಬಾರಿ ಸಂಚರಿಸುವ ಸಂದರ್ಭ ಟೋಲ್ ಕಟ್ಟಿ ಸಾಗುವುದು ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಸರ್ವೀಸ್ ರಸ್ತೆಗಳಿದ್ದು, ಆದರೆ ಈಗ ಇಂತಹ ರಸ್ತೆಯಲ್ಲಿ ಸಾಗುವುದಕ್ಕಿಂತ ಟೋಲ್ ಪಾವತಿಸಿ ಹೋಗುವುದೇ ಉತ್ತಮ ಎಂಬ ಸ್ಥಿತಿ ಇದೆ ಎಂಬ ಮಾತುಗಳು ಸ್ಥಳೀಯ ವಾಹನ ಮಾಲಕರದ್ದು ಆಗಿದೆ. ಆದರೆ ಸ್ಥಳೀಯ ವಾಹನಗಳು ಟೋಲ್ ಪಾವತಿಸಿ ಹೋಗುವುದು ಸಾಧ್ಯವಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ.

ವಾಹನಗಳು ಟೋಲ್ ತಪ್ಪಿಸಿಕೊಂಡು ಸರ್ವೀಸ್ ರಸ್ತೆಯಲ್ಲಿ ಸಾಗುತ್ತವೆ ಎಂಬ ಕಾರಣಕ್ಕೆ ಈ ಹೊಂಡಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹಾಗೇ ಬಿಟ್ಟಿರುವ ಸಾಧ್ಯತೆ ಇದೆಯಾದರೂ ಇಲ್ಲಿನ ಸ್ಥಳೀಯ ವಾಹನ ಸವಾರರಿಗೆ ತೊಂದರೆಯಾಗಿದೆ. ಟೋಲ್ ತಪ್ಪಿಸಿಕೊಂಡು ಸಾಗುವ ವಾಹನಗಳು ಸರ್ವೀಸ್ ರಸ್ತೆಯನ್ನು ಬಿಟ್ಟು ಹೆದ್ದಾರಿಯಲ್ಲೇ ಸಾಗಬೇಕು ಎಂದು ಈ ರೀತಿ ಮಾಡಿರುವುದು ನಿಜವಾದರೆ, ಅದರಿಂದ ಸ್ಥಳೀಯ ವಾಹನದವರು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ಸರ್ವೀಸ್ ರಸ್ತೆಯ ಹೊಂಡಗಳನ್ನು ಮುಚ್ಚಿ ಶಾಶ್ವತ ಪರಿಹಾರ ನೀಡುವಂತೆ ದ.ಕ.ಜಿಲ್ಲಾಧಿಕಾರಿಗಳು ಎನ್‌ಎಚ್‌ಎಐಗೆ ಸೂಚನೆ ನೀಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.