ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಚಂದ್ರ ದಿನಾಚರಣೆಯ ಅಂಗವಾಗಿ ಜುಲೈ 19 ರಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಣಿಪಾಲ ಮಾಹೆಯ ಸಂಶೋಧನಾ ಸ್ಕಾಲರ್‌ ಶ್ರೀ ಅತುಲ್‌ ಭಟ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಚಂದ್ರನ ಅನ್ವೇಷಣೆಯಲ್ಲಿ ಮನುಕುಲವು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳನ್ನು ಮನವರಿಕೆ ಮಾಡುವುದರ ಜೊತೆಗೆ ಜನರ ದಿನನಿತ್ಯದ ಬದುಕಿನಲ್ಲಿ ಚಂದ್ರನ ಪ್ರಭಾವ ಬೀರುವ ಅಂಶಗಳು ಹಾಗೂ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂದರು.

ವಿಜ್ಞಾನ ಕೇಂದ್ರವು ಹಲವು ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಿದ್ದು ಇದರ ಸಂಪೂರ್ಣ ಸದುಪಯೋಗವನ್ನು ನಿರಂತರವಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಡಾ. ಶಕೀಲಾ ಸಹಾಯಕ ಪ್ರಾಧ್ಯಾಪಕರು ಹಾಗೂ ಯೆನೆಪೋಯ ಇನ್ಸಿಟ್ಯೂಟ್‌ ಆಫ್ ಆರ್ಟ್ಸ್‌, ಸೈನ್ಸ್‌, ಕಾಮರ್ಸ್‌ ಆಂಡ್‌ ಮ್ಯಾನೇಜ್‌ ಮೆಂಟ್‌ನ ಶ್ರೀಮತಿ ಕೆ. ಮಾಯಾ ಕುಡ್ವ ಸಹ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ನಂತರ ಶ್ರೀ ಅತುಲ್‌ ಭಟ್‌, ಚಂದ್ರನ ವಿವಿಧ ಆಯಾಮಗಳು, ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆಯ ಅವಧಿಗಳು ಮತ್ತು ಕುಳಿಗಳ ಬಗ್ಗೆ ಸಂರ್ಪೂಣವಾದ ಮಾಹಿತಿಯನ್ನು ಭಾಗವಹಿಸಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ವಿಶೇಷವಾದ ಕಿಟ್‌ಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿತೆಗಳ ಮುಖಾಂತರ ಚಂದ್ರನ ವಿವಿಧ ಆಯಾಮಗಳನ್ನು ಪ್ರಾಯೋಗಿಕವಾಗಿ ವೈಜ್ಞಾನಿಕ ಅಧಿಕಾರಿಯಾದ ವಿಘ್ನೇಶ್‌ ಭಟ್‌ ಹಾಗೂ ತಂಡದವರು ನಡೆಸಿಕೊಟ್ಟರು. ತಾರಾಲಯದಲ್ಲಿ ‘ದಿ ಮೂನ್‌ʼ ಎಂಬ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಡಾ ಅರುಣ ಕುಮಾರ್‌ ಎನ್‌, ಭಾಗವಹಿಸಿ ಮಾತನಾಡುತ್ತಾ ಇಂತಹ ಕಾರ್ಯಕ್ರಮಗಳು ನಾವು ಚಂದ್ರನ ಮೇಲೆ ಮಾಡಿದ ಅನ್ವೇಷಣೆಗಳನ್ನು ಮೆಲುಕು ಹಾಕುವುದರ ಜತೆಗೆ ಮುಂದೆ ಕೈಗೊಳ್ಳಬಹುದಾದ ಸಂಶೋದನೆಗಳಿಗೆ ಪ್ರೇರಣೆಯಾಗಲಿವೆ ಎಂದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ ಅಶೋಕ್‌ ಕೆ.ಆರ್‌ ಮಾತನ್ನಾಡಿ ಪಿಲಿಕುಳವು ನಿರಂತರವಾಗಿ ಇಂತಹ ಕಾರ್ಯಯಕ್ರಮಗಳನ್ನು ಆಯೋಜಿಸುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

ಭಾಗವಹಿಸಿದ ವಿದ್ಯಾರ್ಥಿಗಳು/ಅಧ್ಯಾಪಕರು ಕಾರ್ಯಾಗಾರದ ಅಂಶಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಭಾಗವಹಿಸಿದವರಿಗೆ ಪ್ರಶಂಶಾ ಪತ್ರ ನೀಡಲಾಯಿತು. ಕೇಂದ್ರದ ಕ್ಯರೇಟರ್‌ ಶ್ರೀ ಜಗನ್ನಾಥ ಸ್ವಾಗತಿಸಿದರು. ಕು. ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಇನ್ನೋವೇಶನ್‌ ಹಬ್‌ನ ಮೆಂಟರ್‌ ಕು. ಸಹನಾ ವಂದಿಸಿದರು.