ಮಂಗಳೂರು: ಅಂತಾರಾಷ್ಟ್ರೀಯ, ವಿಶ್ವ ಮಟ್ಟದಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ತೀರ ಕಡಿಮೆ ಇದ್ದು, ಉಳಿದ ರಾಜ್ಯಗಳ ಮಾದರಿಯಲ್ಲಿ ತಕ್ಷಣ ಹೆಚ್ಚಿಸಬೇಕು ಎಂದು ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಎಂ.ಆರ್. ಪೂವಮ್ಮ ಆಗ್ರಹಿಸಿದ್ದಾರೆ.
ಏಷ್ಯನ್ ಗೇಮ್ಸ್ ನ 400 ಮೀ. ಮಹಿಳೆಯರ ರಿಲೇ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಮಂಗಳೂರಿಗೆ ಆಗಮಿಸಿದ ಅವರು, ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹರಿಯಾಣ, ಪಂಜಾಬ್ ಹಾಗೂ ಕೇರಳದಂತಹ ರಾಜ್ಯಗಳಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಿಗೆ 3ರಿಂದ 4 ಕೋಟಿ ರು. ನಗದು ಬಹುಮಾನ ಹಾಗೂ ಡಿವೈಎಸ್‌ಪಿ ಶ್ರೇಣಿಯ ಉನ್ನತ ಸರ್ಕಾರಿ ಉದ್ಯೋಗ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಚಿನ್ನದ ಪದಕಕ್ಕೆ ನೀಡುತ್ತಿರುವ ಮೊತ್ತ ಕೇವಲ 35 ಲಕ್ಷ ರು. ಮಾತ್ರ. ಈ ತಾರತಮ್ಯವನ್ನು ಸರಿಪಡಿಸಿ ಕರ್ನಾಟಕದ ಕ್ರೀಡಾಪಟುಗಳಿಗೆ ಅರ್ಹ ಗೌರವ ಮತ್ತು ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

